ಬೆಂಗಳೂರು: ತನ್ನ ತಾಳ್ಮೆ ಹಾಗೂ ಅದ್ಭುತ ಆಟದಿಂದ 'ದಿ ವಾಲ್' ಎಂದು ಕರೆಸಿಕೊಂಡಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಕನ್ನಡಿಗ ರಾಹುಲ್ ದ್ರಾವಿಡ್ ಇಂದು 48 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ಹುಟ್ಟಿದ್ದು ಮಧ್ಯಪ್ರದೇಶದ ಇಂದೋರ್ನಲ್ಲಾದರೂ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿ. ಅಂಡರ್ 15, ಅಂಡರ್ 17, ಅಂಡರ್ 19 ನಿಂದಲೂ ಕರ್ನಾಟಕ ತಂಡವನ್ನು ಪ್ರತಿನಿಧಿಸಿರುವ ಅವರು ಕನ್ನಡಿಗರಿಗಷ್ಟೇ ಅಲ್ಲ ವಿಶ್ವದ ಕೋಟ್ಯಂತರ ಅಭಿಮಾನಿಗಳ ನೆಚ್ಚಿನ ಕ್ರಿಕೆಟಿಗರಾಗಿದ್ದಾರೆ.
ಶರದ್ ದ್ರಾವಿಡ್, ಪುಷ್ಪಾ ದ್ರಾವಿಡ್ರ ಎರಡನೇ ಮಗನಾಗಿ ಜನವರಿ 11, 1973 ರಲ್ಲಿ ರಾಹುಲ್ ದ್ರಾವಿಡ್ ಜನಿಸಿದರು. ಅವರ ತಂದೆ ಕ್ರಿಕೆಟ್ ಪ್ರೇಮಿಯಾಗಿದ್ದರಿಂದ ದ್ರಾವಿಡ್ಗೆ ಚಿಕ್ಕಂದಿನಿಂದಲೇ ಕ್ರಿಕೆಟ್ಗೆ ಬೇಕಾದ ಎಲ್ಲ ರೀತಿಯ ಸೌಕರ್ಯ ಸಿಕ್ಕಿತ್ತು. ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್ ನಲ್ಲಿ ಕ್ರಿಕೆಟ್ ಶುರು ಮಾಡಿದ ದ್ರಾವಿಡ್ ಕರ್ನಾಟಕದ ಪರ ಕಿರಿಯರ ವಿಭಾಗದಿಂದಲೇ(ಅಂಡರ್15, 17, 19) ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡಿದ್ದರು.
ರಣಜಿ ಕ್ರಿಕೆಟ್ನಲ್ಲಿ ದ್ರಾವಿಡ್:
ದ್ರಾವಿಡ್ ಕೇವಲ 17 ವರ್ಷದವರಿದ್ದಾಗಲೇ ರಣಜಿ ಪ್ರಥಮ ದರ್ಜೆ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಮೊದಲ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ ಭರ್ಜರಿ 84 ರನ್ಗಳಿಸಿ ಮಿಂಚಿದ ಅವರು ನಂತರದ ಮೂರು ರಣಜಿ ಪಂದ್ಯಗಳಲ್ಲಿ (ಗಂಗೂಲಿಯಿದ್ದ ಬೆಂಗಾಲ್ ತಂಡವೂ ಸೇರಿದಂತೆ) ಶತಕ ಸಿಡಿಸಿ ಮಿಂಚಿದರು. 1992 ರಿಂದ 1994 ರವರೆಗೆ ರಣಜಿ ಕ್ರಿಕೆಟ್ನಲ್ಲಿ ಭರ್ಜರಿ ಆಟ ಪ್ರದರ್ಶನ ನೀಡಿದರೂ ಆಯ್ಕೆಗಾರರ ಕಣ್ಣಿಗೆ ಮಾತ್ರ ದ್ರಾವಿಡ್ ಆಟ ಕಾಣಿಸಿರಲಿಲ್ಲ. 1994 ರಲ್ಲಿ ತಂಡಕ್ಕೆ ಆಯ್ಕೆಯಾದರೂ ಆಡುವ 11ರ ಬಳಗದಲ್ಲಿ ಅವಕಾಶ ಸಿಗಲಿಲ್ಲ. 1994-95ರಲ್ಲಿ ರಲ್ಲಿ ಭಾರತ ಎ ಪರ ಹಾಗೂ 1995-96 ರ ರಣಜಿ ಆವೃತ್ತಿಗಳಲ್ಲಿ ರನ್ ಹೊಳೆಯನ್ನೇ ಹರಿಸಿದ ದ್ರಾವಿಡ್ ಕೊನೆಗೂ 1996ರಲ್ಲಿ ಶ್ರೀಲಂಕಾ ವಿರುದ್ಧ ರಾಷ್ಟ್ರೀಯ ತಂಡದ ಪರ ಕ್ರಿಕೆಟ್ಗೆ ಎಂಟ್ರಿಕೊಟ್ರು. ಆದರೆ, ಆ ಟೂರ್ನಿಯಲ್ಲಿ ದ್ರಾವಿಡ್ ಕಳಪೆ ಪದರ್ಶನ ತೋರಿ ನಿರಾಸೆಯನುಭವಿಸಿದ್ದರು.
ಲಾರ್ಡ್ಸ್ನಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ದ್ರಾವಿಡ್ :
ಇಂಗ್ಲೆಂಡ್ ವಿರುದ್ಧ ಅವರ ನೆಲದಲ್ಲೇ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡುವ ಅವಕಾಶ ಪಡೆದ ದ್ರಾವಿಡ್ಗೆ, ತಮ್ಮ ಪ್ರೀತಿಯ 3 ನೇ ಕ್ರಮಾಂಕ ಸಿಗದಿದ್ದರೂ 7ನೇ ಕ್ರಮಾಂಕದಲ್ಲಿಯೇ ಬ್ಯಾಟಿಂಗ್ ನಡೆಸಿ 95 ರನ್ಗಳಿಸಿದ್ದರು. (ಅದೇ ಪಂದ್ಯದಲ್ಲಿ ಗಂಗೂಲಿ ಕೂಡ ಕ್ರಿಕೆಟ್ಗೆ ಪದಾರ್ಪಣೆ ಮಾಡಿ ಭರ್ಜರಿ ಶತಕ ಸಿಡಿಸಿರುತ್ತಾರೆ). ಆ ಸರಣಿಯಲ್ಲಿ ಶತಕಗಳಿಸುವಲ್ಲಿ ವಿಫಲರಾದರೂ ಬ್ರಿಟಿಷ್ ಮಾಧ್ಯಮಗಳ ಹೊಗಳಿಕೆಗೆ ಪಾತ್ರರಾಗಿದ್ದರು.
ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ನಲ್ಲಿ 10 ಸಾವಿರ ರನ್:
ಇಂಗ್ಲೆಂಡ್ ಸರಣಿಯ ನಂತರ ತಿರುಗಿ ನೋಡದ ದ್ರಾವಿಡ್ ದೇಶ ವಿದೇಶಗಳಲ್ಲಿ ಅದ್ಭುತ ಪ್ರದರ್ಶನ ತೋರಿ, ಭಾರತ ಕ್ರಿಕೆಟ್ನಲ್ಲಿ ಸಚಿನ್ ನಂತರದ ಸ್ಥಾನದಲ್ಲಿ ಬಂದು ನಿಂತರು. ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ ಎರಡರಲ್ಲೂ ಸಚಿನ್ರಂತೆಯೇ ರನ್ಗಳಿಸಿದ ದ್ರಾವಿಡ್, ಭಾರತದ ಪರ ಎರಡು ಮಾದರಿಯ ಕ್ರಿಕೆಟ್ನಲ್ಲಿ 10 ಸಾವಿರ ಗಳಿಸಿದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಅಲ್ಲದೇ 2004ರಲ್ಲಿ ಟೆಸ್ಟ್ ಆಡುವ ಎಲ್ಲ ದೇಶಗಳ ವಿರುದ್ಧ ಶತಕಗಳಿಸಿದ ಏಕೈಕ ಬ್ಯಾಟ್ಸ್‌ಮನ್ ಎಂಬ ಶ್ರೇಯಕ್ಕೂ ದ್ರಾವಿಡ್ ಪಾತ್ರರಾಗಿದ್ದಾರೆ.
ಭಾರತದ ಪರ 164 ಟೆಸ್ಟ್ ಪಂದ್ಯಗಳನ್ನಾಡಿರುವ ದ್ರಾವಿಡ್ 13,288 ರನ್ಗಳಿಸಿದ್ದಾರೆ. ಇದರಲ್ಲಿ 36 ಶತಕ ಹಾಗೂ 63 ಅರ್ಧಶತಕ ಸೇರಿವೆ. ದ್ರಾವಿಡ್ರ ಶತಕಗಳಲ್ಲಿ ಬಹುಪಾಲು ಶತಕಗಳು ಬಂದಿರುವುದು ವಿದೇಶಗಳಲ್ಲೇ ಎಂಬುದು ಅವರನ್ನು ವಿಶಿಷ್ಠ ಸಾಲಿನಲ್ಲಿ ಸೇರಿಸುತ್ತದೆ. ದ್ರಾವಿಡ್ ಸಿಡಿಸಿರುವ 36 ಶತಕಗಳಲ್ಲಿ ಭಾರತ 32 ಶತಕಗಳು ಗೆಲುವು ಮತ್ತು ಡ್ರಾ ಸಾಧಿಸಲು ನೆರವಾಗಿವೆ.
ದ್ರಾವಿಡ್ ಟೆಸ್ಟ್ ಆಡುವುದಕ್ಕೆ ಲಾಯಕ್ಕೂ ಎಂಬ ಟೀಕೆಗೆ ತನ್ನ ಬ್ಯಾಟ್ ಮೂಲಕವೇ ಉತ್ತರಿಸಿದ ದ್ರಾವಿಡ್ 344 ಏಕದಿನ ಪಂದ್ಯಗಳನ್ನಾಡಿದ್ದು 10889 ರನ್ಗಳಿಸಿದ್ದಾರೆ. ಇದರಲ್ಲಿ 12 ಶತಕ ಹಾಗೂ 83 ಅರ್ಧಶತಕ ಸಿಡಿಸಿದ್ದಾರೆ. 20 ಎಸೆತಗಳಲ್ಲಿ ಅರ್ಧಶತಕ ಹಾಗೂ ಎರಡು ಬಾರಿ 300ರನ್ಗಳ ಜೊತೆಯಾಟದಲ್ಲಿ ಪಾಲ್ಗೊಂಡ ಹೆಗ್ಗಳಿಕೆ ದ್ರಾವಿಡ್ರದ್ದಾಗಿದೆ. ದ್ರಾವಿಡ್ 2012ರಲ್ಲಿ ತಮ್ಮ 16 ವರ್ಷಗಳ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದರು.
ದ್ರಾವಿಡ್ ಹೆಸರಿನಲ್ಲಿರುವ ಟೆಸ್ಟ್ ಕ್ರಿಕೆಟ್ ದಾಖಲೆಗಳು:
3ನೇ ಕ್ರಮಾಂದಲ್ಲಿ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿರುವ ದ್ರಾವಿಡ್ ಆ ಕ್ರಮಾಂಕದಲ್ಲಿ 10 ಸಾವಿರ ರನ್ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಒಂದು ಟೆಸ್ಟ್ನ ಎರಡು ಇನ್ನಿಂಗ್ಸ್ನಲ್ಲಿ ಎರಡು ಶತಕಗಳನ್ನು ಎರಡು ಬಾರಿ ಸಿಡಿಸಿದ್ದಾರೆ. ಅತಿ ಹೆಚ್ಚು (66) ಶತಕದ ಜೊತೆಯಾಟ, ಅತಿ ಹೆಚ್ಚು ಕ್ಯಾಚ್(210), ಅತಿ ಹೆಚ್ಚು ಎಸೆತಗಳನ್ನು ಎದುರಿಸಿರುವ ಬ್ಯಾಟ್ಸ್‌ಮನ್ ಎಂಬ ದಾಖಲೆಯೂ ದ್ರಾವಿಡ್ ಹೆಸರಿನಲ್ಲಿದೆ.
ನಾಯಕನಾಗಿ ದ್ರಾವಿಡ್ ಸಾಧನೆ:
ದ್ರಾವಿಡ್ ಕೇವಲ ಆಟಗಾರನಾಗಿಯಲ್ಲದೇ ಭಾರತ ತಂಡದ ನಾಯಕನಾಗಿಯೂ ಸೇವೆಸಲ್ಲಿಸಿದ್ದಾರೆ. ಅವರು ನಾಯಕತ್ವದಲ್ಲಿ ಭಾರತ 79 ಏಕದಿನ ಪಂದ್ಯಗಳನ್ನಾಡಿದ್ದು 42 ಗೆಲುವು 33 ಸೋಲುಕಂಡಿದೆ. 25 ಟೆಸ್ಟ್ ಪಂದ್ಯಗಳಲ್ಲ 8 ಸೋಲು, 8 ಗೆಲುವು ಕಂಡಿದೆ. 2007ರಲ್ಲಿ ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿ ಗೆಲುವು ಹಾಗೂ ಪಾಕಿಸ್ತಾನದಲ್ಲಿ 4-1ರಲ್ಲಿ ಏಕದಿನ ಸರಣಿ ಗೆಲುವು ಅವರ ನಾಯಕತ್ವದ ವಿಶೇಷತೆ.
ಕೋಚ್ ಆಗಿ ದ್ರಾವಿಡ್:
ಭಾರತ ಕ್ರಿಕೆಟ್ಗೆ ಅಪಾರ ಸೇವೆ ಸಲ್ಲಿಸಿದ ನಂತರ ದ್ರಾವಿಡ್ ಭವಿಷ್ಯದಲ್ಲಿ ಭಾರತ ತಂಡಕ್ಕೆ ಉತ್ತಮ ಕ್ರಿಕೆಟಿಗರನ್ನು ತಯಾರು ಮಾಡಲು ಅಂಡರ್ 19 ಹಾಗೂ ಭಾರತ ಎ ತಂಡಗಳ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಇವರ ಕೋಚಿಂಗ್ನಲ್ಲಿ ಭಾರತ ತಂಡ ಸತತ ಎರಡು ಬಾರಿ ಅಂಡರ್ 19 ವಿಶ್ವಕಪ್ ಫೈನಲ್ ಪ್ರವೇಶಿಸಿದೆ. ಒಮ್ಮೆ ಚಾಂಪಿಯನ್ ಮತ್ತೊಮ್ಮೆ ರನ್ನರ್ ಆಪ್ ಪ್ರಶಸ್ತಿಗೆ ತೃಪ್ತಿಪಟ್ಟಿತು. ಇವರ ಗರಡಿಯಲ್ಲಿ ಪಳಗಿದ ಪೃಥ್ವಿ ಶಾ, ಮಯಾಂಕ್ ಅಗರ್ವಾಲ್, ಕೆಎಲ್ ರಾಹುಲ್ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತಂಡದ ಪರ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಸದ್ಯಕ್ಕೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿ ಆಟಗಾರರಿಗೆ ತರಬೇತಿ, ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ಕೊಡಿಸುವ ಜವಾಬ್ದಾರಿ ಹೊತ್ತಿದ್ದಾರೆ.
ದ್ರಾವಿಡ್ಗೆ ಸಿಕ್ಕಿರುವ ಪ್ರಶಸ್ತಿ ಪುರಸ್ಕಾರಗಳು
- 1998-ಅರ್ಜುನ ಪ್ರಶಸ್ತಿ
- 2004- ಪದ್ಮಶ್ರೀ
- 2013- ಪದ್ಮಭೂಷಣ
- 1999 -ಸಿಯೆಟ್(CEAT) ಅಂತಾರಾಷ್ಟ್ರೀಯ ಕ್ರಿಕೆಟರ್ ಆಫ್ ದಿ ವರ್ಲ್ಡ್ ಕಪ್
- 2000- ವಿಸ್ಡನ್ ವರ್ಷದ ಕ್ರಿಕೆಟರ್(ಟಾಪ್ 5ರಲ್ಲಿ ಒಬ್ಬರು)
- 2004- ಐಸಿಸಿ ವರ್ಷದ ಕ್ರಿಕೆಟರ್
- 2004- ಐಸಿಸಿ ವರ್ಷದ ಟೆಸ್ಟ್ ಆಟಗಾರ
- 2006- ಐಸಿಸಿ ಟೆಸ್ಟ್ ತಂಡದ ನಾಯಕ
- 2011- NDTV ಇಂಡಿಯನ್ ಆಫ್ ದಿ ಇಯರ್
- 2012- ಡಾನ್ ಬ್ರಾಡ್ಮನ್ ಪ್ರಶಸ್ತಿ
- 2015- 'ವಿಸ್ಡನ್' ಭಾರತದ ಅತ್ಯಧಿಕ ಪರಿಣಾಮ ಟೆಸ್ಟ್ ಬ್ಯಾಟ್ಸ್‌ಮನ್
- 2018- ಐಸಿಸಿ ಹಾಲ್ ಆಫ್ ಫೇಮ್ ಗೌರವ