ನವದೆಹಲಿ: ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಟಿ-20 ಕ್ರಿಕೆಟ್ ಒಲಿಂಪಿಕ್ಸ್ ಕ್ರೀಡಾಕೂಟದ ಭಾಗವಾಗುವುದಕ್ಕೆ ಬೆಂಬಲ ನೀಡಿದ್ದು, ಇದರಿಂದ ಕ್ರಿಕೆಟ್ ವಿಸ್ತರಣೆಯಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
ಸೈಮನ್ ಹ್ಯೂಸ್ ಅವರ ಸಹಯೋಗದೊಂದಿಗೆ ಐಪಿಎಲ್ನ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮಾಲೀಕ ಮನೋಜ್ ಬಾದಲ್ ಅವರ 'ಎ ನ್ಯೂ ಇನ್ನಿಂಗ್ಸ್' ಪುಸ್ತಕ ಬಿಡುಗಡೆಯ ಚರ್ಚುವಲ್ ಸಮಾರಂಭದಲ್ಲಿ ಭಾಗವಹಿಸಿದ ದ್ರಾವಿಡ್, ಟಿ-20 ಕ್ರಿಕೆಟ್ ಒಲಿಂಪಿಕ್ಸ್ ಕ್ರೀಡೆಯಾಗಬೇಕೆಂದು ಬಯಸಿದ್ದಾರೆ.
"ಟಿ-20 ಕ್ರಿಕೆಟ್ ಒಲಿಂಪಿಕ್ಸ್ಗೆ ಸೇರ್ಪಡೆಗೊಳ್ಳುವುದರಿಂದ ಕ್ರಿಕೆಟ್ಗೆ ಒಳ್ಳೆಯದಾಗುತ್ತದೆ ಎಂದು ನಾನು ಭಾವಿಸಿದ್ದೇನೆ. ಏಕೆಂದರೆ ಪ್ರಸ್ತುತ 75ಕ್ಕೂ ಹೆಚ್ಚು ದೇಶಗಳಲ್ಲಿ ಕ್ರಿಕೆಟ್ ಆಡಲಾಗುತ್ತಿದೆ. ಹಾಗಾಗಿ ಟಿ-20 ಕ್ರಿಕೆಟ್ ಬೆಳವಣಿಗೆಯ ಪರ ನನ್ನ ಒಲವಿದೆ" ಎಂದು ದ್ರಾವಿಡ್ ಹೇಳಿದ್ದಾರೆ.
ನಾವು ಈಗಾಗಲೇ ಐಪಿಎಲ್ ದುಬೈನಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿರುವುದನ್ನು ನೋಡಿದ್ದೇವೆ. ಅಲ್ಲಿನ ಕ್ರೀಡಾಂಗಣಗಳ ಗುಣಮಟ್ಟ ಉತ್ತಮವಾಗಿದ್ದರಿಂದ ಐಪಿಎಲ್ ಯಶಸ್ವಿಯಾಗಿತ್ತು. ನೀವು ಆ ಎಲ್ಲಾ ಹಕ್ಕುಗಳನ್ನು ಮತ್ತು ಈ ರೀತಿಯ ಸೌಲಭ್ಯಗಳನ್ನು ಪಡೆಯುವುದಾದರೆ ಕ್ರಿಕೆಟ್ಅನ್ನು ಒಲಿಂಪಿಕ್ಸ್ನಲ್ಲಿ ಕಾಣಲು ಏಕೆ ಸಾಧ್ಯವಿಲ್ಲ? ನಾನು ಖಂಡಿತ ಟಿ-20 ಕ್ರಿಕೆಟ್ ಪರವಿದ್ದೇನೆ. ಅದನ್ನು ಸಾಧ್ಯವಾದರೆ ಒಲಿಂಪಿಕ್ಸ್ಗೆ ಪ್ರವೇಶಿಸಲು ಪ್ರಯತ್ನಿಸಬೇಕು ಎಂದು ದ್ರಾವಿಡ್ ಹೇಳಿದ್ದಾರೆ.