ಕರಾಚಿ: ಪ್ರಸ್ತುತ ಪಾಕಿಸ್ತಾನ ತಂಡದಲ್ಲಿರುವ ವೇಗಿಗಳು ಅವರ ಜನನ ಪ್ರಮಾಣದಲ್ಲಿರುವ ಜನ್ಮದಿನಾಂಕಕ್ಕಿಂತ 8 ರಿಂದ 9 ವರ್ಷ ದೊಡ್ಡವರೆಂದು ಮಾಜಿ ವೇಗಿ ಮೊಹಮ್ಮದ್ ಆಸಿಫ್ ತಿಳಿಸಿದ್ದಾರೆ.
ಮೌಂಟ್ ಮಾಂಗನುಯ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕ್ 101 ರನ್ನುಗಳ ಅಂತರದಲ್ಲಿ ಸೋತ ಬಳಿಕ ಆಸಿಫ್ ಈ ಹೇಳಿಕೆ ನೀಡಿದ್ದಾರೆ.
ಆಟಗಾರರಿಗೆ ವಯಸ್ಸು ಹೆಚ್ಚಾಗಿರುವುದರಿಂದಲೇ ಲಾಂಗ್ ಸ್ಪೆಲ್ ಬೌಲಿಂಗ್ ಮಾಡಲು ಆಗುತ್ತಿಲ್ಲ ಅನ್ನೋದು ಅವರ ಅಭಿಪ್ರಾಯ.
"ಪಾಕ್ ಆಟಗಾರರಿಗೆ ತುಂಬಾ ವಯಸ್ಸಾಗಿದೆ. ಕೇವಲ ಪೇಪರ್ನಲ್ಲಿ ಮಾತ್ರ ಅವರಿಗೆ 17-18 ವರ್ಷಗಳೆಂದು ತೋರಿಸಲಾಗುತ್ತಿದೆ. ವಾಸ್ತವವಾಗಿ ಅವರೆಲ್ಲರಿಗೂ 27-29ವರ್ಷಗಳಾಗಿವೆ" ಎಂದು ಕಮ್ರಾನ್ ಅಕ್ಮಲ್ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಆಟಗಾರರ ಹೆಸರುಗಳನ್ನು ಅವರು ಬಹಿರಂಗಪಡಿಸಿಲ್ಲ.
"ಬೌಲರ್‌ಗಳು 20-25 ಓವರ್ಗಳನ್ನು ಬೌಲ್ ಮಾಡುವ ಸಾಮರ್ಥ್ಯ ಹೊಂದಿಲ್ಲ. ದೇಹವನ್ನು ಹೇಗೆ ಬಗ್ಗಿಸುವುದು ಎಂಬುದೇ ಅವರಿಗೆ ತಿಳಿದಿಲ್ಲ. ಕೇವಲ 5-6 ಓವರ್ ಎಸೆದ ನಂತರ ಅವರಿಗೆ ಮೈದಾನದಲ್ಲಿ ನಿಲ್ಲಲು ಸಾಧ್ಯವಾಗುತ್ತಿಲ್ಲ" ಎಂದು ಆಸಿಫ್ ಹೇಳುತ್ತಾರೆ.
ಪ್ರಸ್ತುತ ಪಾಕ್ ತಂಡದಲ್ಲಿರುವ ವೇಗಿಗಳಾದ ಶಹೀನ್ ಅಫ್ರಿದಿ, ನಸೀಮ್ ಶಾ ಅವರ ವಯಸ್ಸು ಕ್ರಮವಾಗಿ 20 ಮತ್ತು 17 ಎಂದು ತೋರಿಸಲಾಗುತ್ತಿದೆ. ಮೊಹಮ್ಮದ್ ಅಬ್ಬಾಸ್ಗೆ 30 ಮತ್ತು ಫಹೀಮ್ ಅಶ್ರಫ್ಗೆ 26 ವಯಸ್ಸಾಗಿದೆ ಎಂದು ಪಿಸಿಬಿ ಹೇಳುತ್ತಿದೆ.
ಓದಿ: ದಾದಾಗೆ ಕಾಡಿದ ಎದೆ ನೋವು.. ಡೋಂಟ್ವರಿ ಇಂದೇ ಬಿಡುಗಡೆಯಾಗಲಿದ್ದಾರೆ ಗಂಗೂಲಿ