ಮೆಲ್ಬೋರ್ನ್: ದೇಶಿ ಕ್ರಿಕೆಟ್ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿ ಆಸ್ಟ್ರೇಲಿಯಾ ತಂಡಕ್ಕೆ ಸೇರ್ಪಡೆಗೊಂಡಿರುವ ಯುವ ಬ್ಯಾಟ್ಸ್ಮನ್ ವಿಲ್ ಪುಕೋವ್ಸ್ಕಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡುವುದಕ್ಕಾಗಿ ಮತ್ತಷ್ಟು ದಿನ ಕಾಯಬೇಕಾಗುತ್ತದೆ ಎಂಬುದನ್ನ ಆಸೀಸ್ ನಾಯಕ ಟಿಮ್ ಪೇನ್ ಪರೋಕ್ಷವಾಗಿ ತಿಳಿಸಿದ್ದಾರೆ.
ಇತ್ತೀಚೆಗೆ ಮುಗಿದ ಶಫೀಲ್ಡ್ ಶೀಲ್ಡ್ ಟ್ರೋಫಿಯಲ್ಲಿ ಪುಕೋವ್ಸ್ಕಿ ರನ್ಗಳ ಹೊಳೆಯನ್ನೇ ಹರಿಸಿದ್ದಾರೆ. ಸತತ ಎರಡು ದ್ವಿಶತಕ ಸಿಡಿಸಿದ್ದ ಅವರು ಟೂರ್ನಿಯಲ್ಲಿ ಕೇವಲ 3 ಇನ್ನಿಂಗ್ಸ್ಗಳಲ್ಲಿ 495 ರನ್ ದಾಖಲಿಸಿ ಗರಿಷ್ಠ ರನ್ ಗಳಿಕೆಯಲ್ಲಿ ಅಗ್ರ ಸ್ಥಾನದಲ್ಲಿದ್ದರು. ಅವರ ಈ ಪ್ರದರ್ಶನದ ನಂತರ ಯುವ ಆಟಗಾರನನ್ನು ಆಯ್ಕೆ ಸಮಿತಿ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಿತ್ತು. ಆದರೆ ನಾಯಕ ಟಿಮ್ ಪೇನ್ ಪ್ರಕಾರ ಪುಕೋವ್ಸ್ಕಿ ಬದಲು ಜೋ ಬರ್ನ್ಸ್ ಅವರೇ ಡೇವಿಡ್ ವಾರ್ನರ್ ಜೊತೆ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ ಎಂದು ಸೂಚನೆ ನೀಡಿದ್ದಾರೆ.
ಕಳೆದ ಬೇಸಿಗೆಯಲ್ಲಿ ಡೇವಿಡ್ ವಾರ್ನರ್ ಜೊತೆ ಬರ್ನ್ಸ್ ಉತ್ತಮ ಪ್ರದರ್ಶನ ತೋರಿದ್ದಾರೆ. ಅವರಿಬ್ಬರ ಪಾಲುದಾರಿಕೆ ಮತ್ತು ಸಂಬಂಧ ತಂಡಕ್ಕೆ ಮಹತ್ವದ್ದಾಗಿದೆ ಎಂದು ಪೇನ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
"ಅವರಿಬ್ಬರು ನಮಗೆ ಕಳೆದ ಸಮ್ಮರ್ನಲ್ಲಿ ಅತ್ಯುತ್ತಮ ಆರಂಭ ಒದಗಿಸಿಕೊಟ್ಟಿದ್ದಾರೆ. ಬರ್ನ್ಸ್ ಪ್ರಸ್ತುತ ಫಾರ್ಮ್ನಲ್ಲಿಲ್ಲದಿರಬಹುದು ಆಥವಾ ರನ್ ಗಳಿಸಿದೇ ಇರಬಹುದು. ಆದರೆ ಅವರು ಉತ್ತಮ ಕೆಲಸ ಮಾಡಲಿದ್ದಾರೆ ಎಂದು ನಮಗೆ ವಿಶ್ವಾಸವಿದೆ" ಎಂದಿದ್ದಾರೆ.
"ಆಸ್ಟ್ರೇಲಿಯಾ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಅವರ ಸರಾಸರಿ 40ರ ಹತ್ತಿರವಿದೆ. ಇದು ಇನ್ನಿಂಗ್ಸ್ ಆರಂಭಿಸುವ ಬ್ಯಾಟ್ಸ್ಮನ್ನ ದೊಡ್ಡ ಪ್ರಯತ್ನವಾಗಿದೆ. ಈ ಬೇಸಿಗೆಯಲ್ಲಿ ಅವರು ಉತ್ತಮ ಆರಂಭ ಪಡೆಯುತ್ತಾರೆಂದು ನಾನು ನಿರೀಕ್ಷಿಸುತ್ತೇನೆ" ಎಂದು ಪೇನ್ ಬರ್ನ್ಸ್ ಪರ ಬ್ಯಾಟಿಂಗ್ ಬೀಸಿದ್ದಾರೆ.