ಮೆಲ್ಬೋರ್ನ್: ಈ ವರ್ಷದ ಕೊನೆಯಲ್ಲಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗಾಗಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುವ ಸಾಧ್ಯತೆ 10ಕ್ಕೆ 9ರಷ್ಟಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆವಿನ್ ರಾಬರ್ಟ್ಸ್ ಹೇಳಿದ್ದಾರೆ.
ಆಸ್ಟ್ರೇಲಿಯಾ ಕ್ರಿಕೆಟ್ ಸದ್ಯ ಸಾಕಷ್ಟು ಆರ್ಥಿಕ ಒತ್ತಡದಲ್ಲಿದೆ ಎಂದು ರಾಬರ್ಟ್ಸ್ ಹೇಳಿದ್ದಾರೆ. ಪ್ರಸ್ತುತ ಸಮಯದಲ್ಲಿ ಯಾವುದೂ ನಿರ್ಧರಿಸುವಂತೆ ಇರುವುದಿಲ್ಲ. 10ಕ್ಕೆ 9ರಷ್ಟು ಭಾರತ ಮತ್ತು ಆಸೀಸ್ ಸರಣಿ ನಡೆಯುವ ಸಾಧ್ಯತೆ ಇದೆ ಎಂದಿದ್ದಾರೆ.
ಭಾರತ ಮತ್ತು ಆಸೀಸ್ ನಡುವಿನ ಸರಣಿ ವೇಳೆಗೆ ಪ್ರೇಕ್ಷಕರು ಮೈದಾನಕ್ಕೆ ಬರುವಂತಾದರೂ ಆಶ್ಚರ್ಯ ಪಡುವಂತಿಲ್ಲ ಎಂದಿದ್ದಾರೆ. ಆದರೆ ಪ್ರೇಕ್ಷಕರು ಮೈದಾನಕ್ಕೆ ಬರುತ್ತಾರೆ ಎಂಬ ಸಂಪೂರ್ಣ ವಿಶ್ವಾಸವಿಲ್ಲ. ಏನಾಗುತ್ತದೆ ಎಂದು ಕಾದು ನೋಡಬೇಕಿದೆ ಎಂದು ರಾಬರ್ಟ್ಸ್ ತಿಳಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ತಂಡಗಳು ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಈ ವೇಳೆ ಆಟಗಾರರ ಆರೋಗ್ಯ ವಿಚಾರದಲ್ಲಿ ಯಾವ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಸೀಸ್ ಕಾದು ನೋಡಲಿದೆ.