ನವದೆಹಲಿ : ಆಮ್ಲ ಅವರಂತಹ ಆಟಗಾರನೇ ಐಪಿಎಲ್ನಲ್ಲಿ ಅನ್ಸೋಲ್ಡ್ ಆಗಿದ್ದಾರೆ. ಐಪಿಎಲ್ ಹರಾಜು ಒಂದು ರೀತಿಯ ಪೂರ್ವ ನಿಯೋಜಿತ, ಅದು ನನಗೆ ತಿಳಿದಿರುವುದರಿಂದ ನನಗೆ ಯಾವುದೇ ಅಹಂನ ಸಮಸ್ಯೆ ಇಲ್ಲ ಎಂದು ಭಾರತ ತಂಡದ ಅನುಭವಿ ಟೆಸ್ಟ್ ಕ್ರಿಕೆಟಿಗ ಚೇತೇಶ್ವರ್ ಪೂಜಾರ ತಿಳಿಸಿದ್ದಾರೆ.
2018-19ರಲ್ಲಿ ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆಲ್ಲಲು ನೆರವಾಗಿದ್ದ ಚೇತೇಶ್ವರ್ ಪೂಜಾರರನ್ನು ಐಪಿಎಲ್ನಲ್ಲಿ ಯಾವ ಪ್ರಾಂಚೈಸಿಯೂ ಕೊಳ್ಳುವ ಆಲೋಚನೆ ಮಾಡಿಲ್ಲ. 110 ಸ್ಟ್ರೈಕ್ ರೇಟ್ ಇರುವ ಸಾಕಷ್ಟು ಆಟಗಾರರು ಖರೀದಿಯಾಗಿದ್ದಾರೆ. ಆದರೆ, ಪೂಜಾರೆ ತಾವು ಐಪಿಎಲ್ನಲ್ಲಿ ಖರೀದಿಯಾಗದಿರುವುದಕ್ಕೆ ಯಾವುದೇ ರೀತಿಯ ಅಸಮಧಾನ ಇಲ್ಲ ಎಂದಿದ್ದಾರೆ.
ನಾನೊಬ್ಬ ಕ್ರಿಕೆಟಿಗನಾಗಿ ನನಗೆ ಆ ರೀತಿ ಅಭಿಪ್ರಾಯವಿಲ್ಲ. ನನಗೆ ಐಪಿಎಲ್ ಹರಾಜು ಒಂದು ರೀತಿ ಕಠಿಣವಾಗಿದೆ ಎಂದು ತಿಳಿದಿದ್ದೇನೆ. ನಾನು ಐಪಿಎಲ್ನ ಭಾಗವಾಗದಿರುವುದಕ್ಕೆ ಯಾವುದೇ ರೀತಿಯ ಅಹಂನ ಸಮಸ್ಯೆಯಿಲ್ಲ ಎಂದಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದ ಹಾಸಿಮ್ ಆಮ್ಲ ಹಾಗೂ ಇನ್ನಿತರ ಉತ್ತಮ ಟಿ20 ಕ್ರಿಕೆಟರ್ಗಳೇ ಹರಾಜಿನಲ್ಲಿ ಅನ್ಸೋಲ್ಡ್ ಆಗಿರುವುದನ್ನ ಕಂಡಿದ್ದೇನೆ. ಆದ್ದರಿಂದ ನನ್ನನ್ನು ಆಯ್ಕೆ ಮಾಡದಿರುವುದಕ್ಕೆ ನನಗೆ ಯಾವುದೇ ಅಹಂಕಾರದ ಭಾವನೆಯಿಲ್ಲ. ಆದರೆ, ಐಪಿಎಲ್ನಲ್ಲಿ ಆಡುವ ಅವಕಾಶ ಸಿಕ್ಕರೆ ನಾನು ಆಡಲು ಇಷ್ಟಪಡುತ್ತೇನೆ ಎಂದು ಪೂಜಾರ ತಿಳಿಸಿದ್ದಾರೆ.
ಅದೇ ರೀತಿ ತಮ್ಮನ್ನು ಟೆಸ್ಟ್ ಬ್ಯಾಟ್ಸ್ಮನ್ ಎಂಬ ಹಣೆಪಟ್ಟಿ ಕಟ್ಟಿರುವುದರ ಕುರಿತು ಮಾತನಾಡಿದ ಅವರು, ನಾನು ಯಾವಾಗಲು ಇದನ್ನೇ ಹೇಳುತ್ತಿರುತ್ತೇನೆ. ನನಗೆ ಒಮ್ಮೆ ಅವಕಾಶ ಸಿಕ್ಕರೆ ನಂತರ ನಾನು ಕೂಡ ವೈಟ್ ಬಾಲ್ ಕ್ರಿಕೆಟರ್ ಎಂದು ಸಾಬೀತು ಮಾಡಿ ತೋರಿಸುತ್ತೇನೆ. ಕಳೆದ ವರ್ಷ ಲಿಸ್ಟ್ ಎ ಕ್ರಿಕೆಟ್ನಲ್ಲಿ 54ರ ಸರಾಸರಿಯಲ್ಲಿ ರನ್ಗಳಿಸಿದ್ದೇನೆ.
ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲೂ ಶತಕ ಬಾರಿಸಿದ್ದೇನೆ. ಇಂಗ್ಲೆಂಡ್ನಲ್ಲಿ ಲಿಸ್ಟ್ ಎ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದೇನೆ. ನಾನು ಅವಕಾಶಕ್ಕಾಗಿ ಕಾಯುತ್ತಿರುವೆ. ಎಲ್ಲಾ ವಿಭಾಗದಲ್ಲಿ ಆಡುವುದಕ್ಕೆ ಸಂತೋಷವಿದೆ ಎಂದು ಅವರು ಹೇಳಿದ್ದಾರೆ.