ಟ್ರಿನಿಡಾಡ್: ಸಿಪಿಎಲ್ನ ಚೊಚ್ಚಲ ಪಂದ್ಯದಲ್ಲಿ ಶಾರುಕ್ ಖಾನ್ ಒಡೆತನದ ಟ್ರಿಂಬಾಗೊ ನೈಟ್ ರೈಡರ್ಸ್ ತನ್ನ ಮೊದಲ ಪಂದ್ಯದಲ್ಲೇ ಗಯಾನ ಅಮೇಜಾನ್ ವಾರಿಯರ್ಸ್ ವಿರುದ್ಧ ಜಯ ಸಾಧಿಸಿದೆ.
ಟ್ರಿನಿಡಾಡ್ನ ಬ್ರಿಯಾನ್ ಲಾರಾ ಸ್ಟೇಡಿಯಮ್ನಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಸುನಿಲ್ ನರೈನ್ ಅವರ ಆಲ್ರೌಂಡರ್ ಆಟದ ನೆರವಿನಿಂದ ಟಿಕೆಆರ್ 4 ವಿಕೆಟ್ಗಳ ಜಯ ಸಾಧಿಸಿತು.
ಮಳೆಯಿಂದ 17 ಓವರ್ಗಳಿಗೆ ಇಳಿಸಲ್ಪಟ್ಟಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗಯಾನ 5 ವಿಕೆಟ್ ಕಳೆದುಕೊಂಡು 144 ರನ್ ಗಳಿಸಿತ್ತು. ಶಿಮ್ರಾನ್ ಹೆಟ್ಮೈರ್ 44 ಎಸೆತಗಳಲ್ಲಿ 63 ಹಾಗೂ ರಾಸ್ ಟೇಲರ್ 21 ಎಸೆತಗಳಲ್ಲಿ 33 ರನ್ ಗಳಿಸಿ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾದರು.
ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಸುನಿಲ್ ನರೈನ್ 4 ಓವರ್ಗಳಲ್ಲಿ 19 ರನ್ ನೀಡಿ 2 ವಿಕೆಟ್ ಪಡೆದರು. ಆಲಿ ಖಾನ್ 21ಕ್ಕೆ 1 ಹಾಗೂ ಜೇಡನ್ ಸೀಲೆಸ್ ಹಾಗೂ ಬ್ರಾವೋ ದುಬಾರಿಯಾದರೂ ತಲಾ ಒಂದು ವಿಕೆಟ್ ಪಡೆದರು.
145 ರನ್ಗಳ ಗುರಿ ಪಡೆದ ಟಿಕೆಆರ್ ತಂಡದ ಲೆಂಡ್ಲ್ ಸಿಮನ್ಸ್(17) ವಿಕೆಟ್ ಬೇಗ ಕಳೆದುಕೊಂಡರೂ ಸುನಿಲ್ ನರೈನ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದರು. ಕೇವಲ 28 ಎಸೆತಗಳಲ್ಲಿ 2 ಬೌಂಡರಿ ಹಾಗೂ 4 ಸಿಕ್ಸರ್ಗಳ ನೆರವಿನಿಂದ 50 ರನ್ ದಾಖಲಿಸಿದರು.
ಇವರಿಗೆ ಸಾಥ್ ನೀಡಿದ ಮನ್ರೊ 7 ಎಸೆತಗಳಲ್ಲಿ 17, ಡರೆನ್ ಬ್ರಾವೋ 30 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪೊಲಾರ್ಡ್ ಕೇವಲ 10 ರನ್ಗಳಿಗೆ ವಿಕೆಟ್ ಒಪ್ಪಿಸಿದರೂ ಟಿಕೆಆರ್ ಸಂಘಟಿತ ಪ್ರದರ್ಶನ ತೋರಿ ಗೆಲುವು ಪಡೆದುಕೊಂಡಿತು.
ಎರಡನೇ ಪಂದ್ಯದಲ್ಲಿ ಕ್ರಿಸ್ಲಿನ್, ಎವಿನ್ ಲೆವಿಸ್ ಅವರಂತಹ ಸ್ಫೋಟಕ ಬ್ಯಾಟ್ಸ್ಮನ್ಗಳನ್ನು ಹೊಂದಿರುವ ಸೇಂಟ್ ಕಿಟ್ಸ್ ತಂಡ ನೇವಿಲ್ಸ್ ಪೇಟ್ರಿಯೋಟ್ಸ್ ಬಾರ್ಬಡೋಸ್ ನೀಡಿದ್ದ 154 ರನ್ಗಳ ಗುರಿಯನ್ನು ಬೆನ್ನತ್ತಲಾಗದೆ 6 ರನ್ಗಳಿಂದ ಸೋಲು ಕಂಡಿದೆ.