ನಾಗ್ಪುರ: ವೇಗಿ ದೀಪಕ್ ಚಹರ್ ಹ್ಯಾಟ್ರಿಕ್ ಸೇರಿದಂತೆ 6 ವಿಕೆಟ್ ಹಾಗೂ ಕೆ.ಎಲ್.ರಾಹುಲ್ ಹಾಗೂ ಶ್ರೇಯಸ್ ಐಯ್ಯರ್ ಅವರ ಅರ್ಧ ಶತಕದ ನೆರವಿನಿಂದ ಬಾಂಗ್ಲಾದೇಶ ವಿರುದ್ಧದ ಟಿ-20 ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ 30 ರನ್ಗಳಿಂದ ಗೆದ್ದು ಬೀಗಿದ ರೋಹಿತ್ ಪಡೆ ಸರಣಿಯನ್ನು 2-1ರ ಅಂತರದಿಂದ ಕೈವಶ ಮಾಡಿಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಎದುರಾಳಿ ಬಾಂಗ್ಲಾದೇಶಕ್ಕೆ 174 ರನ್ಗಳ ಗೆಲುವಿನ ಗುರಿ ನೀಡಿತ್ತು. ರನ್ ಗುರಿ ಬೆನ್ನತ್ತಿದ್ದ ಬಾಂಗ್ಲಾಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ತಂಡ ಮೊತ್ತ ಕೇವಲ 12 ರನ್ ಆಗಿದ್ದಾಗಲೇ ಲಿಟ್ಟನ್ ದಾಸ್ (9) ಹಾಗೂ ಸೌಮ್ಯ ಸರ್ಕಾರ್ (0) ಪೆವಿಲಿಯನ್ ಸೇರಿಕೊಂಡರು. ಆದರೆ ಈ ವೇಳೆ ಒಂದಾದ ಮೊಹಮದ್ ನಯೀಮ್ (81) ಹಾಗೂ ಮೊಹಮದ್ ಮಿಥುನ್ (27) ಮೂರನೇ ವಿಕೆಟ್ಗೆ 98 ರನ್ ಸೇರಿಸಿ ರೋಹಿತ್ ಬಳಗಕ್ಕೆ ಆತಂಕ ಮೂಡಿಸಿದರು. ಆದರೆ ಇವರಿಬ್ಬರ ವಿಕೆಟ್ ಪತನದ ಬಳಿಕ ಬಾಂಗ್ಲಾ ಮತ್ತೆ ಪತನದ ಹಾದಿ ಹಿಡಿಯಿತು. ಅನುಭವಿ ಮುಷ್ಫಿಕರ್ ರಹೀಮ್ (0), ನಾಯಕ ಮೊಹಮದುಲ್ಲಾ (8) ಬೇಗ ಔಟ್ ಆಗುವ ಮೂಲಕ ಬಾಂಗ್ಲಾ ಗೆಲುವಿನ ಕನಸು ಕಮರಿತು. ಅಲ್ಲದೆ ಬಾಂಗ್ಲಾ 19.2 ಓವರ್ಗಳಲ್ಲಿ ಆಲೌಟ್ ಆಯಿತು. ಭಾರತದ ಪರ ಮಾರಕ ಬೌಲಿಂಗ್ ನಡೆಸಿದ ವೇಗಿ ದೀಪಕ್ ಚಹರ್ 3.2 ಓವರ್ಗಳಲ್ಲಿ ಕೇವಲ 7 ರನ್ ನೀಡಿ ಹ್ಯಾಟ್ರಿಕ್ ಸಹಿತ 6 ವಿಕೆಟ್ ಹಾಗೂ ಶಿವಂ ದುಬೆ 3 ವಿಕೆಟ್ ಕಬಳಿಸಿದರು.
-
#TeamIndia win by 30 runs to clinch the three-match series 2-1.#INDvBAN pic.twitter.com/vChBI1jjxW
— BCCI (@BCCI) November 10, 2019 " class="align-text-top noRightClick twitterSection" data="
">#TeamIndia win by 30 runs to clinch the three-match series 2-1.#INDvBAN pic.twitter.com/vChBI1jjxW
— BCCI (@BCCI) November 10, 2019#TeamIndia win by 30 runs to clinch the three-match series 2-1.#INDvBAN pic.twitter.com/vChBI1jjxW
— BCCI (@BCCI) November 10, 2019
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಕ್ಕೆ ಬಾಂಗ್ಲಾ ಬೌಲರ್ ಸೈಫುಲ್ಲಾ ಇಸ್ಲಾಂ ಆಘಾತ ನೀಡಿದ್ರು. ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ನಾಯಕ ರೋಹಿತ್ ಶರ್ಮಾ 2 ರನ್ ಗಳಿಸಿ ಸೈಫುಲ್ಲಾ ಇಸ್ಲಾಂಗೆ ಕ್ಲೀನ್ ಬೌಲ್ಡ್ ಆದರು. ಆರಂಭಿಕ ಆಟಗಾರ ಶಿಖರ್ ಧವನ್ 4 ಬೌಂಡರಿ ಬಾರಿಸಿ ಅಬ್ಬರಿಸುವ ಸೂಚನೆ ನೀಡಿದರಾದರೂ 19 ರನ್ಗಳಿಸಿ ಸೈಫುಲ್ಲಾ ಬೌಲಿಂಗ್ನಲ್ಲಿ ಕ್ಯಾಚಿತ್ತು ನಿರ್ಗಮಿಸಿದರು.
ಈ ವೇಳೆ 35 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಕನ್ನಡಿಗ ಕೆ.ಎಲ್.ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಆಸರೆಯಾದರು. ಬಿರುಸಿನ ಬ್ಯಾಟಿಂಗ್ ನಡೆಸಿದ ರಾಹುಲ್ ಟಿ-20ಯಲ್ಲಿ 6ನೇ ಅರ್ಧಶತಕ ದಾಖಲಿಸಿದ್ರು. ಉತ್ತಮವಾಗಿ ಆಡುತ್ತಿದ್ದ ರಾಹುಲ್, ಅಲ್ ಅಮೀನ್ ಬೌಲಿಂಗ್ನಲ್ಲಿ ಲಿಟ್ಟನ್ ದಾಸ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು.
ಬಳಿಕ ಅಬ್ಬರದ ಆಟವಾಡಿದ ಯುವ ಆಟಗಾರ ಶ್ರೇಯಸ್ ಐಯ್ಯರ್ 5 ಸಿಕ್ಸರ್ ಹಾಗೂ 3 ಬೌಂಡರಿ ಸಿಡಿಸಿ ಅಂತರಾಷ್ಟ್ರೀಯ ಟಿ-20 ಪಂದ್ಯದಲ್ಲಿ ಮೊದಲ ಅರ್ಧಶತಕ ಸಿಡಿಸಿದರು. 62 ರನ್ಗಳಿಸಿರುವಾಗ ಸೌಮ್ಯ ಸರ್ಕಾರ್ ಬೌಲಿಂಗ್ನಲ್ಲಿ ಲಿಟ್ಟನ್ ದಾಸ್ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ಇನ್ನು ಕಳೆದ 2 ಪಂದ್ಯಗಳಲ್ಲಿ ನೀರಸ ಪ್ರದರ್ಶನ ತೋರಿದ್ದ ರಿಷಭ್ ಪಂತ್ ಇಂದು ಕೂಡಾ ನಿರಾಶೆ ಅನುಭವಿಸಿದ್ರು. ಕೇವಲ 6 ರನ್ಗಳಿಸಿ ಅವರು ಪೆವಿಲಿಯನ್ ಸೇರಿಕೊಂಡರು. ಅಂತಿಮವಾಗಿ ಮನೀಶ್ ಪಾಂಡೆ ಮತ್ತು ಶಿವಂ ದುಬೆ ಉತ್ತಮವಾಗಿ ಬ್ಯಾಟ್ ಬೀಸಿ ತಂಡದ ಮೊತ್ತವನ್ನು 170ರ ಗಡಿ ದಾಟಿಸಿದ್ದರು.
ದೆಹಲಿಯಲ್ಲಿ ನಡೆದ ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾ 7 ವಿಕೆಟ್ ಜಯ ಸಾಧಿಸಿದ್ದರೆ, ರಾಜಕೋಟ್ನಲ್ಲಿನ 2ನೇ ಪಂದ್ಯದಲ್ಲಿ ಭಾರತ 8 ವಿಕೆಟ್ಗಳಿಂದ ಬಾಂಗ್ಲಾವನ್ನು ಮಣಿಸಿತ್ತು. ಇಂದಿನ ಮೂರನೇ ಪಂದ್ಯವನ್ನು 30 ರನ್ಗಳಿಂದ ಗೆದ್ದು ರೋಹಿತ್ ಪಡೆ ಸರಣಿಯನ್ನು 2-1 ಅಂತರದಿಂದ ಕೈವಶಮಾಡಿಕೊಂಡಿದೆ.ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವೇಗದ ಬೌಲರ್ ದೀಪಕ್ ಚಹರ್ ಪಂದ್ಯ ಪುರುಷ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.