ಚೆನ್ನೈ: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಪದಾರ್ಪಣೆ ಮಾಡಿ ಉತ್ತಮ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದ ಕರ್ನಾಟಕದ ಪ್ರಸಿಧ್ ಕೃಷ್ಣ ಈ ವರ್ಷದ ಐಪಿಎಲ್ನಲ್ಲೂ ತಮ್ಮ ಪ್ರದರ್ಶನವನ್ನು ಕಾಯ್ದುಕೊಂಡು ಹೋಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 54 ರನ್ ನೀಡಿ 4 ವಿಕೆಟ್ ಪಡೆಯುವ ಮೂಲಕ ಪಂದ್ಯ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಕೆಕೆಆರ್ ಪರ ಕಣಕ್ಕಿಳಿಯುತ್ತಿದ್ದು, ಆತ್ಮವಿಶ್ವಾದಿಂದ ಆಡುವುದಾಗಿ ಸ್ಟಾರ್ ಸ್ಪೋರ್ಟ್ಸ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
"ನನ್ನಲ್ಲೂ ಕ್ರಿಕೆಟ್ ಹಾಗೆಯೇ ಉಳಿದಿದೆ, ಭಾರತಕ್ಕಾಗಿ ಆ ರೀತಿ ಪ್ರದರ್ಶನ ತೋರಿದ್ದಕ್ಕೆ ಖುಷಿಯಿದೆ, ತುಂಬಾ ದಿನದ ನಂತರ ಮತ್ತೆ ಹೊಸ ಟೂರ್ನಮೆಂಟ್ನಲ್ಲಿ ಆಡುತ್ತಿದ್ದೇನೆ. ಅದೇ ರೀತಿಯ ಪ್ರದರ್ಶನವನ್ನು ತೋರಿ ತಂಡವನ್ನು ಗೆಲ್ಲಿಸಿಕೊಡಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.
ಮಾರ್ಗನ್ ವಿರುದ್ಧ ಆಡಿದ್ದು ಮತ್ತು ಇದೀಗ ಜೊತೆಯಾಗಿ ಆಡುತ್ತಿರುವುದರ ಬಗ್ಗೆ ಮಾತನಾಡಿದ ಕೃಷ್ಣ, ಸರಣಿಯ ಸಂರ್ಭದಲ್ಲೂ ಮಾರ್ಗನ್ ಜೊತೆಗೆ ಒಳ್ಳೆಯ ಮಾತಕತೆ ನಡೆಯುತ್ತಿತ್ತು, ಇಲ್ಲೂ ನಡೆಯುತ್ತಿದೆ. ನನಗೆ ಇದು ತುಂಬಾ ಹಿತಕರವಾಗಿದೆ ಎಂದು ತಿಳಿಸಿದ್ದಾರೆ.
ಕೆಕೆಆರ್ಗೆ ಬೆಂಗಳೂರಿನಲ್ಲಿ 5 ಪಂದ್ಯಗಳನ್ನಾಡಲಿರುವುದು ನಿಮಗೆ ಯಾವ ರೀತಿ ಅನುಕೂಲವಾಗಲಿದೆ ಎಂದು ಕೇಳಿದ್ದಕ್ಕೆ ಉತ್ತರಿಸಿದ ಕೃಷ್ಣ, "ನಾನು ಚಿನ್ನಸ್ವಾಮಿಯಲ್ಲಿ ಕಳೆದ 10 ವರ್ಷಗಳಿಂದ ಆಡುತ್ತಿದ್ದೇನೆ. ಆ ಜಾಗ ನನಗೆ ಆರಾಮದಾಯಕ ಜಾಗವಾಗಿದ್ದು, ಕೊನೆಯ 5 ಪಂದ್ಯಗಳಲ್ಲಿ ಉತ್ತಮವಾಗಿ ಫಿನಿಶ್ ಮಾಡಲು ಬಯಸುತ್ತೇನೆ" ಎಂದು ತಿಳಿಸಿದ್ದಾರೆ.
ಇದನ್ನು ಓದಿ: ಬರೋಬ್ಬರಿ 699 ದಿನಗಳ ನಂತರ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿದ 40 ವರ್ಷದ ಹರ್ಭಜನ್ ಸಿಂಗ್