ನವದೆಹಲಿ: ಸಯ್ಯದ್ ಮುಷ್ತಾಕ್ ಅಲಿ ಟಿ20 ಪಂದ್ಯಾವಳಿಯೊಂದಿಗೆ ಜನವರಿ 10 ರಿಂದ ಬಹುನಿರೀಕ್ಷಿತ ಭಾರತೀಯ ದೇಶಿ ಕ್ರಿಕೆಟ್ ಸೀಸನ್ ಪ್ರಾರಂಭವಾಗಲಿದೆ. ತಂಡಗಳು ಜನವರಿ 2 ರಂದು ತಮ್ಮ ಬಯೋ-ಹಬ್‌ಗಳಲ್ಲಿ ಒಟ್ಟುಗೂಡಲಿದ್ದು, ಫೈನಲ್ ಪಂದ್ಯ ಜನವರಿ 31 ರಂದು ನಡೆಯಲಿದೆ.
ಕೋವಿಡ್-19ನಿಂದ ಮೊಟಕುಗೊಂಡಿರುವ ದೇಶಿ ಋತುವನ್ನು ಮುಂದಿನ ವರ್ಷ ಜನವರಿಯಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟಿ20 ರಾಷ್ಟ್ರೀಯ ಚಾಂಪಿಯನ್ಶಿಪ್ ಆಯೋಜನೆ ಮೂಲಕ ಆರಂಭಿಸಲು ಬಿಸಿಸಿಐ ನಿರ್ಧರಿಸಿದೆ.
ಅಲ್ಲದೆ, ಅಂತಾರಾಜ್ಯ ವರ್ಗಾವಣೆ ಮತ್ತು ಅತಿಥಿ ಆಟಗಾರರ ನೋಂದಣಿಯ ಕೊನೆಯ ದಿನಾಂಕವನ್ನು ಇದೇ ತಿಂಗಳ 20 ರವರೆಗೆ ವಿಸ್ತರಿಸಲಾಗಿದೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಪಂದ್ಯಾವಳಿಗೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ಸರಿಯಾದ ಸಮಯದಲ್ಲಿ ಸದಸ್ಯರೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ತಿಳಿಸಿದ್ದಾರೆ.
ಓದಿ 'ರಾಷ್ಟ್ರದ ಕರ್ತವ್ಯದಿಂದ ತಂದೆಯ ಕರ್ತವ್ಯದವರೆಗೆ'.. 4 ತಿಂಗಳ ನಂತರ ಅಗಸ್ತ್ಯನೊಂದಿಗೆ ಅಪ್ಪ ಹಾರ್ದಿಕ್
ಕೊರೊನಾ ವೈರಸ್ ನಂತರ ಆರಂಭವಾಗುತ್ತಿರುವ ದೇಶಿ ಋತುವನ್ನು ಟಿ20 ಪಂದ್ಯಾವಳಿ ಆಯೋಜಿಸುವ ಮೂಲಕ ಪ್ರಾರಂಭಿಸುವುದು ಉತ್ತಮ ಮಾರ್ಗವಾಗಿದೆ ಎಂದು ರಾಜ್ಯ ಸಂಸ್ಥೆಗಳು ಈ ಹಿಂದೆ ಹೇಳಿದ್ದವು.
ಟಿ20 ಪಂದ್ಯಾವಳಿಯ ಆತಿಥ್ಯವನ್ನು ರಾಜ್ಯ ಸಂಸ್ಥೆಗಳು ಬೆಂಬಲಿಸುವ ಹಿಂದಿನ ಕಾರಣವನ್ನು ರಾಜ್ಯ ಸಂಘದ ಅಧಿಕಾರಿಯೊಬ್ಬರು ವಿವರಿಸಿದ್ದು, "ಸಾಂಕ್ರಾಮಿಕ ರೋಗವು ಒಂದು ನಿರ್ದಿಷ್ಟ ಕಾಳಜಿಯ ವಿಷಯವಾಗಿದೆ, ಪೋಷಕರು ಸಹ ಮಕ್ಕಳ ಮೇಲೆ ಕಾಳಜಿ ವಹಿಸುತ್ತಿದ್ದಾರೆ. ಒಂದಿಬ್ಬರು ಪೋಷಕರು ತಮ್ಮ ಮಕ್ಕಳನ್ನು ತರಬೇತಿ ಶಿಬಿರದಿಂದ ಹಿಂದಕ್ಕೆ ಕರೆಸಿಕೊಂಡಿದ್ದಾರೆ. ಟಿ20 ಸ್ವರೂಪವು ಕಡಿಮೆ ಸಮಯವನ್ನು ಬೇಡುತ್ತದೆ. ಆದ್ದರಿಂದ ಚುಟುಕು ಸರಣಿ ಸೂಕ್ತವಾದ ಆಯ್ಕೆಯಾಗಿದೆ" ಎಂದು ಹೇಳಿದ್ದಾರೆ.