ಮುಂಬೈ: 12ನೇ ಆವೃತ್ತಿಯ ಐಪಿಎಲ್ ಚಾಂಪಿಯನ್ ಮುಂಬೈ ತಮ್ಮ ತಂಡದ ಯುವ ಸ್ಪಿನ್ ಬೌಲರ್ ಮಯಾಂಕ್ ಮಾರ್ಕಂಡೆ ಅವರನ್ನು ಡೆಲ್ಲಿ ಕ್ಯಾಪಿಟಲ್ಗೆ ಬಿಟ್ಟುಕೊಟ್ಟು ಆ ತಂಡದಿಂದ ಆಲ್ರೌಂಡರ್ ಶೆರ್ಫೇನ್ ರುದರ್ಫೋರ್ಡ್ರನ್ನು ತಂಡಕ್ಕೆ ಸೇರಿಸಿಕೊಂಡಿದೆ.
2018ರ ಆವೃತ್ತಿಯ ಐಪಿಎಲ್ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದ ಮಾರ್ಕಂಡೆ 15 ವಿಕೆಟ್ ಪಡೆದು ತಂಡದ ಮೂರನೇ ಗರಿಷ್ಠ ಬೌಲರ್ ಎನಿಸಿಕೊಂಡಿದ್ದರು. ಆದರೆ 12ನೇ ಆವೃತ್ತಿಯಲ್ಲಿ ಮಾರ್ಕಂಡೆಗೆ ಅವಕಾಶ ಸಿಕ್ಕಿದ್ದು ಕೇವಲ 3 ಪಂದ್ಯದಲ್ಲಿ ಮಾತ್ರ. ಯುವ ಸ್ಪಿನ್ನರ್ ರಾಹುಲ್ ಚಹಾರ್ಗೆ ಮುಂಬೈ ಪ್ರಾಶಸ್ತ್ಯ ನೀಡಿದ ಕಾರಣ ಮಾರ್ಕಂಡೆಗೆ ಹೆಚ್ಚು ಅವಕಾಶ ಸಿಕ್ಕಿರಲಿಲ್ಲ.
ಇನ್ನು ರುದರ್ಫೋರ್ಡ್ ಗ್ಲೋಬಲ್ ಟಿ-20 ಲೀಗ್ನಲ್ಲಿ ಸ್ಫೋಟಕ ಆಟ ತೋರಿದ್ದರಿಂದ ಅವರನ್ನು ಸಿಪಿಎಲ್, ಟಿ-10 ಹಾಗೂ ಐಪಿಎಲ್ನಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ರು. ಮಧ್ಯಮ ವೇಗಿ ಹಾಗೂ ಸ್ಫೋಟಕ ಬ್ಯಾಟ್ಸ್ಮನ್ ಆಗಿರುವ ರುದರ್ಫೋರ್ಡ್ ಅವರನ್ನು ಇದೀಗ ಆಟಗಾರರ ಬದಲಾವಣೆ ನಿಯಮದಲ್ಲಿ ಡೆಲ್ಲಿ ಹಾಗೂ ಮುಂಬೈ ತಂಡಗಳು ತಂಡಕ್ಕೆ ಸೇರಿಸಿಕೊಂಡಿವೆ.
ಮಾರ್ಕಂಡೆ ಉತ್ತಮ ಬೌಲರ್ ಆಗಿದ್ದು, ಅವರನ್ನು ಬಿಡುತ್ತಿರುವುದು ನಮ್ಮ ಕಠಿಣ ನಿರ್ಧಾರವಾಗಿದೆ. ಅವರಿಗೆ ಉತ್ತಮ ಪ್ರತಿಭೆಯಿದ್ದು ಭಾರತೀಯ ಕ್ರಿಕೆಟ್ನಲ್ಲಿ ಮುಂದೊಂದು ದಿನ ಖಂಡಿತ ಮಿಂಚಲಿದ್ದಾರೆ. ಅವರ ಭವಿಷ್ಯ ಉತ್ತಮವಾಗಿರಲಿ ಎಂದು ಮುಂಬೈ ಇಂಡಿಯನ್ಸ್ ಕುಟುಂಬ ಬಯಸುತ್ತದೆ ಎಂದು ತಂಡದ ಮಾಲೀಕ ಆಕಾಶ್ ಅಂಬಾನಿ ಹೇಳಿದ್ದಾರೆ.
ಇನ್ನು ಪ್ರತಿಭಾನ್ವಿತ ಯುವ ಆಟಗಾರ ರುದರ್ಫೋರ್ಡ್ ಅವರನ್ನು ಮುಂಬೈ ಇಂಡಿಯನ್ಸ್ ಕುಟುಂಬಕ್ಕೆ ಸ್ವಾಗತಿಸುತ್ತೇವೆ. 2019ರ ಆವೃತ್ತಿಯಲ್ಲಿ ಅವರು ತಮ್ಮ ಆಲ್‌ರೌಂಡ್ ಆಟದ ಮೂಲಕ ನಮ್ಮ ತಂಡದ ಗಮನ ಸೆಳೆದಿದ್ದಾರೆ. ಮುಂಬೈ ಇಂಡಿಯನ್ಸ್ ಅವರ ತವರು ನೆಲೆಯಾಗಲಿದೆ ಎಂದು ನಾವು ನಂಬಿದ್ದೇವೆ ಎಂದು ವೆಸ್ಟ್ ಇಂಡೀಸ್ ಆಟಗಾರನಿಗೆ ಆಕಾಶ್ ಅಂಬಾನಿ ಸ್ವಾಗತ ಕೋರಿದ್ದಾರೆ.