ಹೈದರಾಬಾದ್: ಟೀಂ ಇಂಡಿಯಾದ ಕೂಲ್ ಕ್ಯಾಪ್ಟನ್ ಎಂದು ಹೆಸರುಗಳಿಸಿರುವ ಮಹೇಂದ್ರ ಸಿಂಗ್ ಧೋನಿಗಿಂದು 39ನೇ ಹುಟ್ಟುಹಬ್ಬದ ಸಂಭ್ರಮ. ಭಾರತ ಕಂಡಿರುವ ಶ್ರೇಷ್ಠ ಹಾಗೂ ಕೂಲ್ ನಾಯಕರಲ್ಲಿ ಮುಂಚೂಣಿಯಲ್ಲಿ ನಿಂತುಕೊಳ್ಳುವ ಇವರು ತಮ್ಮ ನಾಯಕತ್ವದ ವೇಳೆ ಐಸಿಸಿಯ ಮೂರು ಪ್ರಶಸ್ತಿ ಗೆದ್ದಿರುವ ಏಕೈಕ ನಾಯಕ ಎಂಬ ಸಾಧನೆ ಮಾಡಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ 2007 ಟಿ-20 ವಿಶ್ವಕಪ್, 2011 ಐಸಿಸಿ ಏಕದಿನ ವಿಶ್ವಕಪ್ ಹಾಗೂ 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದೆ.
ವಿಕೆಟ್ ಹಿಂದಿನ ಮಾಂತ್ರಿಕ ಎಂಬ ಹೆಸರುಗಳಿಸಿರುವ ಮಹೇಂದ್ರ ಸಿಂಗ್ ಧೋನಿ ವಿಕೆಟ್ ಕೀಪಿಂಗ್ನಲ್ಲಿ ಮಾಸ್ಟರ್. ಎದುರಾಳಿ ಆಟಗಾರನ ವೀಕ್ನೆಸ್ ತಿಳಿದುಕೊಂಡು ಅವರನ್ನ ಔಟ್ ಮಾಡುವ ಕಲೆ ಇವರಿಗೆ ಕರಗತವಾಗಿತು.
ಡಿಸೆಂಬರ್ 23, 2004ರಲ್ಲಿ ಬಾಂಗ್ಲಾ ವಿರುದ್ಧದ ಏಕದಿನ ಪಂದ್ಯದ ಮೂಲಕ ಟೀಂ ಇಂಡಿಯಾ ತಂಡಕ್ಕೆ ಪದಾರ್ಪಣೆ ಮಾಡಿದ್ದ ಧೋನಿ, ಅಂದಿನ ಪಂದ್ಯದಲ್ಲಿ ರನೌಟ್ ಆಗಿ ಶೂನ್ಯ ಸಂಪಾದನೆ ಮಾಡಿದ್ದರು. ಆದರೆ ಏಪ್ರಿಲ್ 05, 2005ರಲ್ಲಿ ಪಾಕಿಸ್ತಾನದ ವಿರುದ್ಧ 148ರನ್ಸಿಡಿಸುವ ಮೂಲಕ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ಹೊರಹಾಕುವ ಜತೆಗೆ ಏಕದಿನ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿದರು. ಇದಾದ ಬಳಿಕ ಕ್ರಿಕೆಟ್ನಲ್ಲಿ ಅವರು ದಾಖಲೆ ಮೇಲೆ ದಾಖಲೆ ನಿರ್ಮಾಣ ಮಾಡಿದ್ದಾರೆ. 2005ರಲ್ಲಿ ಶ್ರೀಲಂಕಾ ವಿರುದ್ಧ 183ರನ್ಗಳಿಕೆ ಮಾಡಿದ್ದು, ಧೋನಿ ಅವಿಸ್ಮರಣಿಯ ಇನ್ನಿಂಗ್ಸ್ಗಳಲ್ಲಿ ಒಂದಾಗಿದೆ.
90 ಟೆಸ್ಟ್ ಪಂದ್ಯಗಳನ್ನಾಡಿರುವ ಧೋನಿ 4,876ರನ್ಗಳಿಕೆ ಮಾಡಿದ್ದಾರೆ. 350 ಏಕದಿನ ಪಂದ್ಯಗಳಿಂದ 10,773ರನ್ಗಳಿಸಿದ್ದು, 98 ಟಿ-20 ಪಂದ್ಯಗಳಿಂದ 1,617ರನ್ ಸಿಡಿಸಿದ್ದಾರೆ. ವಿಕೆಟ್ ಕೀಪರ್ ಆಗಿ ಮೂರು ಮಾದರಿ ಕ್ರಿಕೆಟ್ನಿಂದ 829 ಪ್ಲೇಯರ್ಸ್ ಔಟ್ ಮಾಡಿದ್ದಾರೆ.
ಏಕದಿನ ಪಂದ್ಯದಲ್ಲಿ 199 ಪಂದ್ಯಗಳಲ್ಲಿ ನಾಯಕತ್ವ ಜವಾಬ್ದಾರಿ ಹೊತ್ತುಕೊಂಡಿದ್ದ ಧೋನಿ 110 ಪಂದ್ಯಗಳಲ್ಲಿ ಗೆಲುವು, 74ರಲ್ಲಿ ಸೋಲು ಕಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಿ ಕೂಡ ದಾಖಲೆ ಬರೆದಿರುವ ಧೋನಿ ಮೂರು ಸಲ ತಂಡ ಚಾಂಪಿಯನ್ ಆಗುವಂತೆ ಮಾಡಿದ್ದಾರೆ. 2019ರ ಐಸಿಸಿ ಏಕದಿನ ಸೆಮಿಫೈನಲ್ ಪಂದ್ಯ ಧೋನಿ ಪಾಲಿಗೆ ಕೊನೆಯ ಪಂದ್ಯವಾಗಿದ್ದು, ತದನಂತರ ಅವರು ಮೈದಾನಕ್ಕೆ ಇಳಿದಿಲ್ಲ.