ನವದೆಹಲಿ: ವಿಂಡೀಸ್ ಪ್ರವಾಸದಿಂದ ದೂರ ಉಳಿದಿರುವ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ತಮ್ಮ ಇಚ್ಛೆಯಂತೆ ಸೇನೆಯ ಪ್ಯಾರಾಚೂಟ್ ರೆಜಿಮೆಂಟ್ ಸೇರಿದ್ದು, ಕಾಶ್ಮೀರ ಕಣಿವೆಯಲ್ಲಿ ಎರಡು ವಾರಗಳ ಕಾಲ ಸೇನೆ ಜೊತೆ ತರಬೇತಿ ಪಡೆಯಲಿದ್ದಾರೆ.
ಧೋನಿಗೆ ಈಗಾಗಲೇ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆ ನೀಡಲಾಗಿದ್ದು ಕೆಲ ದಿನಗಳ ತರಬೇತಿಯನ್ನೂ ಪಡೆದಿದ್ದಾರೆ. ಇದೇ 31ರಂದು ಕಾಶ್ಮೀರದಲ್ಲಿರುವ ವಿಕ್ಟರ್ ಫೋರ್ಸ್ ಅನ್ನು ಧೋನಿ ಸೇರಲಿದ್ದು, ಆಗಸ್ಟ್ 15ರವರೆಗೆ ವಿವಿಧ ರೀತಿಯ ತರಬೇತಿ ಪಡೆಯಲಿದ್ದಾರೆ. ಈ ಅವಧಿಯಲ್ಲಿ ಗಸ್ತು ತಿರುಗುವುದು, ಕಾವಲುಗಾರಿಕೆ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ಮಾಹಿ ಪಾಲ್ಗೊಳ್ಳಲಿದ್ದಾರೆ.
ಭಾರತ ಕ್ರಿಕೆಟ್ ತಂಡದ ನಾಯಕನಾಗಿ 2 ವಿಶ್ವಕಪ್ ಗೆಲ್ಲಿಸಿಕೊಟ್ಟಿರುವ ಮಾಹಿ ಕಾಶ್ಮೀರದಲ್ಲಿ ಸೇನೆಯ ಜೊತೆಯಲ್ಲಿಯೇ ಸಂಪೂರ್ಣವಾಗಿ ಸಮಯ ಕಳೆಯಲಿದ್ದಾರೆ ಹೀಗಾಗಿ ಅವರ ರಕ್ಷಣೆಯ ಅಗತ್ಯವಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಭೂ ಸೇನೆ ಮುಖ್ಯಸ್ಥ ಬಿಪಿನ್ ರಾವತ್, ಧೋನಿ ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುವುದಕ್ಕೂ ಮೊದಲು ಅಗತ್ಯವಿರುವ ಸಾಮಾನ್ಯ ತರಬೇತಿಗಳನ್ನ ನೀಡಲಾಗಿದೆ. ತರಬೇತಿ ವೇಳೆ ಅವರು ಸಮರ್ಥರೆಂದು ನಮಗೆ ಮನವರಿಕೆ ಆಗಿದ್ದರಿಂದಲೇ ಅವಕಾಶ ನೀಡಲಾಗಿದೆ ಎಂದಿದ್ದಾರೆ.
ಅಲ್ಲದೆ ಎಂ.ಎಸ್.ಧೋನಿಗೆ ನಾವು ರಕ್ಷಣೆ ನೀಡುವ ಅವಶ್ಯಕತೆ ಇಲ್ಲ ಅವರೇ ನಾಗರಿಕರನ್ನ ರಕ್ಷಣೆ ಮಾಡಲಿದ್ದಾರೆ ಎಂದು ಬಿಪಿನ್ ರಾವತ್ ತಿಳಿಸಿದ್ದಾರೆ.
ಸುಮಾರು ಎರಡು ವಾರಗಳ ತರಬೇತಿಯಲ್ಲಿ ಧೋನಿ ಸೇನೆಯ ಜೊತೆಯಲ್ಲಿಯೇ ಸಂಪೂರ್ಣವಾಗಿ ಸಮಯ ಕಳೆಯಲಿದ್ದಾರೆ. ಪ್ಯಾರಾಚೂಟ್ ರೆಜಿಮೆಂಟ್ನಲ್ಲಿ ಧೋನಿ ತರಬೇತಿಗೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಕೆಲ ದಿನಗಳ ಹಿಂದೆ ಅನುಮತಿ ನೀಡಿದ್ದರು. ಆದರೆ ಸೇನಾ ಕಾರ್ಯಾಚರಣೆಯಲ್ಲಿ ಪಾಲ್ಗೊಳಲು ಧೋನಿಗೆ ಅವಕಾಶ ನೀಡಿಲ್ಲ.