ಕೋಲ್ಕತ್ತಾ: 9 ಸದಸ್ಯರ ವೈದ್ಯಕೀಯ ಮಂಡಳಿ ಇಂದು ಮಧ್ಯಾಹ್ನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಮುಂದಿನ ಚಿಕಿತ್ಸಾ ವಿಧಾನದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ.
ಬಿಸಿಸಿಐ ಅಧ್ಯಕ್ಷ ಗಂಗೂಲಿ ಅವರ ಆರೋಗ್ಯ ಸ್ಥಿತಿ ಮೊದಲಿಗಿಂತ ಉತ್ತಮವಾಗಿದೆ. ಸೌರವ್ ಗಂಗೂಲಿ ಅವರ ಆರೋಗ್ಯ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಹೃದಯ ತಜ್ಞ ದೇವಿ ಶೆಟ್ಟಿ ಇಂದು ಕೋಲ್ಕತ್ತಾಗೆ ಭೇಟಿ ನೀಡಲಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಹೃದ್ರೋಗ ತಜ್ಞ ದೇವಿ ಶೆಟ್ಟಿ ಈಗಾಗಲೇ ಸೌರವ್ ಗಂಗೂಲಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡದೊಂದಿಗೆ ಮಾತನಾಡಿದ್ದೇನೆ. ಮಾಧ್ಯಮಗಳಲ್ಲಿ ಈ ಕುರಿತು ವರದಿಯನ್ನೂ ಗಮನಿಸಿದ್ದೇನೆ. ವೈದ್ಯರು ಸರಿಯಾದ ಚಿಕಿತ್ಸೆ ನೀಡುತ್ತಿದ್ದಾರೆ. ಮುಂದಿನ ಚಿಕಿತ್ಸೆಯ ಬಗ್ಗೆ ಅಲ್ಲಿಗೆ ತೆರಳಿ ತೀರ್ಮಾನಿಸುತ್ತೇನೆ ಎಂದು ಹೇಳಿದ್ದರು.
ಮೂಲಗಳು ಪ್ರಕಾರ ಇಂದು ಬೆಳಗ್ಗೆ ವೈದ್ಯಕೀಯ ಮಂಡಳಿಯ ಸದಸ್ಯರು ಬಿಸಿಸಿಐ ಅಧ್ಯಕ್ಷರಿಗೆ ನಡೆಸಲಿರುವ ಆಂಜಿಯೋಪ್ಲಾಸ್ಟಿಯ ತಾತ್ಕಾಲಿಕ ದಿನಾಂಕಗಳ ಕುರಿತು ಸಭೆ ನಡೆಸಲಿದ್ದಾರೆ.
ಲಘು ಹೃದಯಾಘಾತದ ಕಾರಣ ಕಳೆದ ಎರಡು ದಿನಗಳಿಂದ ಗಂಗೂಲಿ ಕೋಲ್ಕತ್ತಾದ ವುಡ್ಲ್ಯಾಂಡ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.