ನವದೆಹಲಿ: ಆರ್ಸಿಬಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಮತ್ತು ಸ್ಟಾರ್ ಬ್ಯಾಟ್ಸ್ಮನ್ ಎಬಿ ಡಿ ವಿಲಿಯರ್ಸ್ ಇರುವುದರಿಂದ ಮ್ಯಾಕ್ಸ್‌ವೆಲ್ ಮೇಲೆ ಒತ್ತಡ ಕಡಿಮೆಯಿದ್ದು, ಅವರು ಈ ಆವೃತ್ತಿಯನ್ನು ಖಂಡಿತಾ ಸ್ಮರಣೀಯನ್ನಾಗಿಸಿಕೊಳ್ಳಲಿದ್ದಾರೆ ಎಂದು ಆರ್ಸಿಬಿ ಮಾಜಿ ಕೋಚ್ ಮತ್ತು ಕಿವೀಸ್ ಮಾಜಿ ನಾಯಕ ಡೇನಿಯಲ್ ವಿಟೋರಿ ಅಭಿಪ್ರಾಯಪಟ್ಟಿದ್ದಾರೆ.
2021ರ ಆವೃತ್ತಿಯಲ್ಲಿ ಮ್ಯಾಕ್ಸ್ವೆಲ್ಗೆ 14.25 ಕೋಟಿ ರೂ. ನೀಡಿ ಆರ್ಸಿಬಿ ಖರೀದಿಸಿದೆ. ಈ ಹಿಂದೆ ಮ್ಯಾಕ್ಸ್‌ವೆಲ್ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಆಡಿದ್ದರು.
"ಸಾಮಾನ್ಯವಾಗಿ ಎದುರಾಳಿಗಳು ಎಬಿ ಮತ್ತು ಕೊಹ್ಲಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಇದಿರಿಂದ ಮ್ಯಾಕ್ಸ್‌ವೆಲ್ ಒಂದು ರೀತಿಯಲ್ಲಿ ಸ್ವತಂತ್ರವಾಗಿ ಆಡುವುದಕ್ಕೆ ಅವಕಾಶ ಸಿಗುತ್ತದೆ. ಆಶಾದಾಯಕವಾಗಿ ಒತ್ತಡವಿಲ್ಲದಿರುವುದರಿಂದ ಐಪಿಎಲ್ನಲ್ಲಿ ಪ್ರತಿಯೊಬ್ಬರು ಕೆಲವು ವರ್ಷಗಳಿಂದ ಆಸೀಸ್ ಆಲ್ರೌಂಡರ್ನಿಂದ ಏನನ್ನು ನಿರೀಕ್ಷಿಸುತ್ತಿದ್ದಾರೋ ಅದನ್ನು ಈ ಬಾರಿ ಸಾಧಿಸಲು ಅವರಿಂದ ಸಾಧ್ಯವಾಗುತ್ತದೆ" ಎಂದು ವಿಟೋರಿ ಹೇಳಿದ್ದಾರೆ.
ಮಾಜಿ ಆರ್ಸಿಬಿ ಕೋಚ್ ಪ್ರಕಾರ ಮ್ಯಾಕ್ಸ್ವೆಲ್ಗೆ ಜವಾಬ್ದಾರಿ ಸಿಕ್ಕರೆ ಅವರು ಹೆಚ್ಚಿನದನ್ನು ಹೊರತರಲಿದ್ದಾರೆ. ಹಾಗಾಗಿ ಅವರು ಕೊಹ್ಲಿ ಮತ್ತು ಡಿವಿಲಿಯರ್ಸ್ರೊಂದಿಗೆ ನಾಯಕತ್ವದ ಗುಂಪಿನ ಭಾಗವಾಗಬೇಕು ಎಂದು ಹೇಳಿದ್ದಾರೆ.
"ಅವರು (ಮ್ಯಾಕ್ಸ್‌ವೆಲ್) ಮೆಲ್ಬೋರ್ನ್ ಸ್ಟಾರ್ಸ್ನಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದಾರೆ. ಏಕೆಂದರೆ ಅಲ್ಲಿ ಅವರು ನಾಯಕನಾಗಿದ್ದಾರೆ, ಹಿರಿಯ ಆಟಗಾರನಾಗಿದ್ದಾರೆ. ಜೊತೆಗೆ ಅಲ್ಲಿ ಸಾಕಷ್ಟು ಜವಾಬ್ದಾರಿಯನ್ನು ನೀಡಲಾಗಿರುತ್ತದೆ. ಹಾಗಾಗಿ ವಿಲಿಯರ್ಸ್ ಮತ್ತು ಕೊಹ್ಲಿ ಆರ್ಸಿಬಿಯಲ್ಲಿ ಕೇಂದ್ರ ಬಿಂದುವಾಗಿದ್ದಾರೆ, ಇವರಿಬ್ಬರು ಮ್ಯಾಕ್ಸ್ವೆಲ್ರನ್ನು ತಮ್ಮ ನಾಯಕತ್ವದ ಗುಂಪಿನ ಜೊತೆ ಬಳಸಿಕೊಳ್ಳುವುದು ಆರ್ಸಿಬಿಗೆ ಲಾಭವಾಗಲಿದೆ" ಎಂದು ವಿಟೋರಿ ಹೇಳಿದ್ದಾರೆ
ಮ್ಯಾಕ್ಸ್‌ವೆಲ್ 13ನೇ ಆವೃತ್ತಿಯ ಐಪಿಎಲ್ನಲ್ಲಿ ಕೇವಲ 108 ರನ್ ಗಳಿಸಿದ್ದರು. ಅವರು ಇಡೀ ಟೂರ್ನಿಯಲ್ಲಿ ಒಂದೇ ಒಂದು ಸಿಕ್ಸರ್ ಸಿಡಿಸಲು ಸಾಧ್ಯವಾಗಿರಲಿಲ್ಲ. ಆದರೆ ಬಿಗ್ಬ್ಯಾಶ್ನಲ್ಲಿ 14 ಪಂದ್ಯಗಳಿಂದ 379 ರನ್ ಗಳಿಸಿ ಫಾರ್ಮ್ ಕಂಡುಕೊಂಡಿದ್ದಾರೆ. ಜೊತೆಗೆ ಇತ್ತೀಚೆಗೆ ಭಾರತದೆದುರಿನ ಸರಣಿಯಲ್ಲೂ ಉತ್ತಮ ಪ್ರದರ್ಶನ ನೀಡಿರುವುದರಿಂದ ಆರ್ಸಿಬಿ ಅವರ ಮೇಲೆ ಸಾಕಷ್ಟು ಭರವಸೆಯನ್ನು ಹೊಂದಿದ್ದು, ದುಬಾರಿ ಬೆಲೆ ನೀಡಿ ಖರೀದಿಸಿದೆ.
ಇದನ್ನು ಓದಿ:ದೇವದತ್ ಪಡಿಕ್ಕಲ್ ಕೋವಿಡ್ ಟೆಸ್ಟ್ ಮತ್ತೆ ನೆಗೆಟಿವ್: ಆರ್ಸಿಬಿ ಸೇರಿದ ಯುವ ಓಪನರ್