ಮೆಲ್ಬೋರ್ನ್: ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮಾರ್ಕ್ ಟೇಲರ್ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಮುಂದೆ ಹೋಗುವ ಮುನ್ಸೂಚನೆ ಇದೆ. ಆದರೂ ಈ ವಾರ ನಡೆಯುವ ಸಭೆಯಲ್ಲಿ ಐಸಿಸಿ ನಿರ್ಧಾರ ತೆಗೆದುಕೊಳ್ಳಬೇಕೆಂದು ಎಂದಿದ್ದಾರೆ.
ಟಿ-20 ವಿಶ್ವಕಪ್ ಟೂರ್ನಿ ನಡೆಯಬೇಕಿದ್ದ ಸಮಯದಲ್ಲಿ ಐಪಿಎಲ್ ನಡೆದರೆ, ಆಸ್ಟ್ರೇಲಿಯಾದ ಆಟಗಾರರು ಭಾರತ ಶ್ರೀಮಂತ ಲೀಗ್ನಲ್ಲಿ ಭಾಗವಹಿಸುವ ಸಾಧ್ಯತೆಯಿದೆ ಎಂದು ಟೇಲರ್ ಅಭಿಪ್ರಾಯಪಟ್ಟಿದ್ದಾರೆ.
'ಅಕ್ಟೋಬರ್‌ನಲ್ಲಿ ಟಿ-20 ವಿಶ್ವಕಪ್ ಟೂರ್ನಿ ಯೋಜಿಸಿದಂತೆ ಆಸ್ಟ್ರೇಲಿಯಾದಲ್ಲಿ ನಡೆಯುವುದಿಲ್ಲ ಎಂಬುದು ನನ್ನ ಭಾವನೆ. ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ವಿಶ್ವಕಪ್ ಪಂದ್ಯಾವಳಿಯನ್ನು ನಡೆಸುವ ಸಾಧ್ಯತೆ ಇದೆಯೇ? ಎಂದರೆ ಅದಕ್ಕೆ ಉತ್ತರ ಬಹುಶಃ ಇಲ್ಲ ಎನ್ನಬಹುದು' ಎಂದು ಮಾಜಿ ಕ್ರಿಕೆಟಿಗ ಟೇಲರ್ ಹೇಳಿದ್ದಾರೆ.
ಈ ವಾರ ನಿರ್ಧಾರವನ್ನು ತೆಗೆದುಕೊಂಡರೆ ಉತ್ತಮ. ಏಕೆಂದರೆ ಪ್ರತಿಯೊಬ್ಬರೂ ತಮ್ಮ ಯೋಜನೆಯನ್ನು ಪ್ರಾರಂಭಿಸಬಹುದು ಮತ್ತು ನಾವು ಇಲ್ಲಿ ಕುಳಿತು ಸಾಧ್ಯತೆ ಇದೆ, ಬಹುಶಃ ಹಾಗಾಗುತ್ತದೆ, ಹೀಗಾಗುತ್ತದೆ ಎಂದು ಹೇಳುವುದನ್ನು ನಿಲ್ಲಿಸಬಹುದು ಎಂದಿದ್ದಾರೆ.
ಮೇ 28 ರಂದು ಐಸಿಸಿ ಮಂಡಳಿ ಸಭೆ ನಡೆಯಲಿದ್ದು, ಕೋವಿಡ್-19 ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಾಗುತ್ತದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಪುರುಷರ ಟಿ-20 ವಿಶ್ವಕಪ್‌ನ ಭವಿಷ್ಯ ಕೂಡ ನಿರ್ಧಾರವಾಗಲಿದೆ ಎಂದು ಹೇಳಲಾಗುತ್ತಿದೆ.