ಲಂಡನ್: ವಿಂಡೀಸ್ ಮೂಲದ ವೇಗಿ ಜೋಫ್ರಾ ಆರ್ಚರ್ ಒಂದು ಅವಕಾಶಕ್ಕಾಗಿ 2 ರಿಂದ 3 ವರ್ಷಗಳ ಕಾಲ ಚಾತಕ ಪಕ್ಷಿಯಂತೆ ಕಾಯ್ದಿದ್ದರು. ಆದರೆ ಅವರ ಸಾಮರ್ಥ್ಯ ಅವರ ಕೈಬಿಡಲಿಲ್ಲ. ಹಾಗೆಯೇ ಅದೃಷ್ಟ ಅವರ ಕೈ ಹಿಡಿದಿದ್ದು ,ಮೂರೇ ತಿಂಗಳಲ್ಲಿ ಇಂಗ್ಲೆಂಡ್ ತಂಡದ ಮೂರು ವಿಭಾಗದ ಕ್ರಿಕೆಟ್ ತಂದಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಹೌದು, ಕಳೆದ ಮೂರು ವರ್ಷಗಳಿಂದ ಕೇವಲ ಪ್ರಥಮ ದರ್ಜೆ ಕ್ರಿಕೆಟ್, ಟಿ20 ಲೀಗ್ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಆರ್ಚರ್ ಇಂಗ್ಲೆಂಡ್ ತಂಡದಲ್ಲಿ ಆಡುವ ಉದ್ದೇಶದಿಂದ 2014 ರಲ್ಲೆ ಇಂಗ್ಲೆಂಡ್ಗೆ ಬಂದು ನೆಲೆಸಿದ್ದರು. ಉತ್ತಮ ಬೌಲಿಂಗ್ ಕೌಶಲ್ಯ ಹೊಂದಿದ್ದ ಆರ್ಚರ್ಗೆ ಇಂಗ್ಲೆಂಡ್ ತಂಡದಲ್ಲಿ ಅವಕಾಸ ಸಿಗಲು ಬರೋಬ್ಬರಿ 3 ವರ್ಷದ ನಂತರ ಅವರ ಕನಸು ನನಸಾಯಿತು.
ವಿಶ್ವಕಪ್ಗೂ ಮುನ್ನ ನಡೆದ ಪಾಕಿಸ್ತಾನದ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಯಲ್ಲಿ ಇಂಗ್ಲೆಂಡ್ ತಂಡದ ಪರ ಸೀಮಿತ ಓವರ್ಗಳಿಗೆ ಕಾಲಿಟ್ಟ ಆರ್ಚರ್, ನಂತರ 15 ದಿನಗಳಲ್ಲೇ ತಮ್ಮ ಅದ್ಭುತ ಪ್ರದರ್ಶನದಿಂದ ವಿಶ್ವಕಪ್ ತಂಡದಲ್ಲೂ ಅವಕಾಶ ಗಿಟ್ಟಿಸಿಕೊಂಡರು. ವಿಶ್ವಕಪ್ನಲ್ಲಿ 20 ವಿಕೆಟ್ ಪಡೆಯುವ ಮೂಲಕ ಮಿಂಚಿದ್ದರು. ಇದೀಗ ಇವರ ವಿಶ್ವಕಪ್ನ ಚತೋಹಾರಿ ಪ್ರದರ್ಶನದಿಂದ ಆಸ್ಟ್ರೇಲಿಯಾ ವಿರುದ್ಧ ನಡೆಯುವ ಪ್ರತಿಷ್ಠಿತ ಆ್ಯಶಸ್ ಟೆಸ್ಟ್ ತಂಡದಲ್ಲೂ ಅವಕಾಶ ಪಡೆದಿದ್ದಾರೆ.
ಒಂದು ಅವಕಾಶಕ್ಕಾಗಿ ಕಾಯುತ್ತಿದ್ದ ಪ್ರತಿಭಾವಂತ ಕ್ರಿಕೆಟಿಗ ಕೇವಲ ಮೂರೇ ತಿಂಗಳಲ್ಲಿ ತನ್ನ ಕನಸಿನ ತಂಡವಾದ ಇಂಗ್ಲೆಂಡ್ ಪರ ಮೂರು ಮಾದರಿಯಲ್ಲೂ ಅವಕಾಶ ಗಿಟ್ಟಿಸಿಕೊಂಡಿರುವುದು ನಿಜಕ್ಕೂ ಸಾಧನೀಯವಾಗಿದೆ. ಅದರಲ್ಲೂ ಆ್ಯಶಸ್ನಂತಹ ಮಹತ್ತರ ಟೂರ್ನಿಯಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡುತ್ತಿರುವುದು ಆರ್ಚರ್ ಅದೃಷ್ಟ ಎಂದು ಹೇಳಲೇಬೇಕಾಗಿದೆ.