ಮೆಲ್ಬೋರ್ನ್ : ಆಸ್ಟ್ರೇಲಿಯಾದ ದಂತಕಥೆಗಳು ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಅವರ ನಾಯಕತ್ವದ ಕೌಶಲ್ಯಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿರುವುದನ್ನು ಕಂಡು ಹೃದಯ ತುಂಬಿ ಬರುತ್ತಿದೆ ಎಂದು ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಹೇಳಿದ್ದಾರೆ.
ನಾಯಕ ವಿರಾಟ್ ಕೊಹ್ಲಿಯವರ ಅಲಭ್ಯತೆ ನಂತರ ಅವರ ಸ್ಥಾನದಲ್ಲಿ ಹೆಜ್ಜೆ ಹಾಕಿದ ರಹಾನೆ, ಎಂಸಿಜಿಯಲ್ಲಿ ಭಾರತಕ್ಕೆ ಸ್ಮರಣೀಯ ಗೆಲುವು ತಂದುಕೊಡಲು ಅತ್ಯುತ್ತಮ ಪಾತ್ರ ನಿರ್ವಹಿಸಿದ್ದಾರೆ ಎಂದು ಗವಾಸ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ಕಾಮೆಂಟರಿ ಬಾಕ್ಸ್‌ನಲ್ಲಿದ್ದ ಕೆಲ ಆಸ್ಟ್ರೇಲಿಯಾದ ದಂತಕಥೆಗಳ ನಡುವೆ ಇದ್ದಾಗ, ರಹಾನೆ ತಂಡವನ್ನು ಮುನ್ನಡೆಸುವ ರೀತಿಗೆ ಅವರು ವ್ಯಕ್ತಪಡಿಸುತ್ತಿದ್ದ ಮೆಚ್ಚುಗೆಯ ಮಾತುಗಳು ನಿಜಕ್ಕೂ ಅದ್ಭುತ ಎಂದು ಗವಾಸ್ಕರ್ ತಮ್ಮ ಕಮೆಂಟರಿ ಬಾಕ್ಸ್ನ ಅನುಭವ ಬಿಚ್ಚಿಟ್ಟಿದ್ದಾರೆ.
ಕಮೆಂಟರಿ ಬಾಕ್ಸ್ನಲ್ಲಿ ರಿಕಿ ಪಾಂಟಿಂಗ್, ಆ್ಯಡಂ ಗಿಲ್‌ಕ್ರಿಸ್ಟ್, ಮೈಕ್ ಹಸ್ಸಿ, ಶೇನ್ ವಾರ್ನ್ ಅವರಂತಹವರು ರಹಾನೆ ಅವರ ನಾಯಕತ್ವವನ್ನು ಪ್ರಶಂಸಿಸುವುದನ್ನು ಬಿಟ್ಟರೆ ಬೇರೇನೂ ಇರಲಿಲ್ಲ. ರಹಾನೆ ಬಗ್ಗೆ ಈ ವ್ಯಕ್ತಿಗಳು ಮೆಚ್ಚುಗೆ ವ್ಯಕ್ತಪಡಿಸುವುದನ್ನು ನೋಡುವುದು ತುಂಬಾ ಹೃದಯಸ್ಪರ್ಶಿಯಾಗಿತ್ತು ಎಂದಿದ್ದಾರೆ.
ಓದಿ ಭಾರತ ತಂಡಕ್ಕೆ ಮತ್ತೊಮ್ಮೆ ಅದೃಷ್ಟವಾದ ಎಂಸಿಜಿ: ಇಲ್ಲಿ ಟೀಂ ಇಂಡಿಯಾ ಗೆದ್ದ ಪಂದ್ಯಗಳೆಷ್ಟು?
ಆದರೆ, ವಿರಾಟ್ ಕೊಹ್ಲಿ ಟೆಸ್ಟ್ ನಾಯಕನಾಗಿದ್ದು, ಪಿತೃತ್ವ ರಜೆಯಿಂದ ಹಿಂದಿರುಗಿದ ನಂತರ ರಹಾನೆ ಅವರಿಗೆ ದಾರಿ ಮಾಡಿಕೊಡಬೇಕು ಎಂದು ಗವಾಸ್ಕರ್ ಸ್ಪಷ್ಟಪಡಿಸಿದ್ದಾರೆ. "ಆಸ್ಟ್ರೇಲಿಯನ್ನರು ತಮ್ಮದೇ ಆದ ಸಮಸ್ಯೆಗಳನ್ನು ಹೊಂದಿದ್ದಾರೆ. ಉತ್ತಮ ಆರಂಭಿಕ ಜೋಡಿಯನ್ನು ಹುಡುಕಬೇಕಿದೆ.
ನಾಲ್ಕು ಮತ್ತು ಐದನೇ ಬೌಲರ್ ಅಗತ್ಯವಿದ್ದಾಗ ವಿಕೆಟ್ ಪಡೆಯುವ ಯಾರನ್ನಾದರೂ ಅವರು ಹುಡುಕಬೇಕಾಗಿದೆ. ಭಾರತಕ್ಕೂ ತನ್ನದೇಯಾದ ಸಮಸ್ಯೆಗಳಿವೆ. ನಮ್ಮವರು ಬ್ಯಾಟಿಂಗ್ ಬಗ್ಗೆ ಯೋಚನೆ ಮಾಡಬೇಕಿದೆ. ಮಧ್ಯಮ ಕ್ರಮಾಂಕದ ಮೇಲೂ ಕಣ್ಣಿಡಬೇಕು. ಆದರೆ, ಬೌಲಿಂಗ್‌ನಲ್ಲಿ ಅವರಿಗೆ ಚಿಂತೆ ಇಲ್ಲ" ಎಂದಿದ್ದಾರೆ.