ದುಬೈ: ರಾಯಲ್ ಚಾಂಲೆಂಜರ್ಸ್ ಬೆಂಗಳೂರು ತಂಡದಲ್ಲಿ 2011ರಿಂದ 2013 ರವರೆಗೆ ರಾರಾಜಿಸಿದ್ದ ವಿಂಡೀಸ್ ದೈತ್ಯ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ಕಳೆದ 2 ವರ್ಷಗಳಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಆಡುತ್ತಿದ್ದಾರೆ. ಗುರುವಾರ ಪಂಜಾಬ್ ತಂಡ ಆರ್ಸಿಬಿ ಎದುರಿಸಲಿದ್ದು, ಈ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.
ಪಂದ್ಯಕ್ಕೂ ಮೊದಲು ಮಾತನಾಡಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್, " ಕ್ರಿಸ್ ಗೇಲ್ ಟಿ-20 ಕ್ರಿಕೆಟ್ನ ಸ್ಫೋಟಕ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾಗಿದ್ದಾರೆ. ಅವರನ್ನು ಮೊದಲ ಪಂದ್ಯದಿಂದ ಕೈಬಿಡಬೇಕೆಂಬ ನಿರ್ಧಾರ ನಿಜಕ್ಕೂ ಅತ್ಯಂತ ಕಠಿಣವಾಗಿತ್ತು. ಆದರೆ, ಅವರು ಆದಷ್ಟು ಶೀಘ್ರದಲ್ಲೇ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಮರಳಲಿದ್ದಾರೆ" ಎಂದು ಹೇಳಿದ್ದಾರೆ.
ಆದರೆ, ರಾಹುಲ್ ಇಂದು ನಡೆಯುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಗೇಲ್ ಆಡಲಿದ್ದಾರಾ ಎಂಬುದರ ಬಗ್ಗೆ ಯಾವುದೇ ಖಚಿತ ಮಾಹಿತಿ ನೀಡಿಲ್ಲ. ಆದರೆ ಕೋಟ್ಯಂತರ ಅಭಿಮಾನಿಗಳು ಮಾತ್ರ ಸಿಕ್ಸರ್ ಸರದಾರನ ಆಟವನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ.
ಯೂನಿವರ್ಸಲ್ ಖ್ಯಾತಿಯ ಕ್ರಿಸ್ ಗೇಲ್ ಟಿ-20 ಕ್ರಿಕೆಟ್ ಇತಿಹಾಸದಲ್ಲಿ 404 ಪಂದ್ಯಗಳನ್ನಾಡಿದ್ದು, 146.94 ರ ಸ್ಟ್ರೈಕ್ರೇಟ್ನಲ್ಲಿ 13,296 ರನ್ ಸಿಡಿಸಿದ್ದಾರೆ. ಅವರು 22 ಶತಕ ಹಾಗೂ 82 ಅರ್ಧಶತಕ ಬಾರಿಸಿದ್ದಾರೆ.
ಇನ್ನು ಐಪಿಎಲ್ನಲ್ಲಿ 125 ಪಂದ್ಯಗಳನ್ನಾಡಿರುವ ಕ್ರಿಸ್ಗೇಲ್ 6 ಶತಕಗಳ ಸಹಿತ 4,484 ರನ್ ರನ್ ಸಿಡಿಸಿದ್ದಾರೆ. ಅವರು ಗರಿಷ್ಠ ಸ್ಕೋರ್ 175 ಆಗಿದೆ.