ಅಬುಧಾಬಿ: ಯಾವುದೇ ಹೊಸ ಕೋವಿಡ್ -19 ಪ್ರಕರಣಗಳು ಕಂಡುಬರದೇ ಇದ್ದರೂ ಕೂಡ ಇಂದು ನಡೆಯಬೇಕಿದ್ದ ಯುಎಇ ಮತ್ತು ಐರ್ಲೆಂಡ್ ನಡುವಿನ ಏಕದಿನ ಪಂದ್ಯವನ್ನು ಮುಂದೂಡಲಾಗಿದೆ.
ಯುಎಇ ಸಾರ್ವಜನಿಕ ಆರೋಗ್ಯ ಇಲಾಖೆ ನಿರ್ದೇಶನಗಳು "ಸ್ಪರ್ಧಾತ್ಮಕ ಕ್ರೀಡೆಯನ್ನು ಪುನಾರಂಭಿಸಲು" ಅನುಮತಿಸದ ಕಾರಣ ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಮತ್ತು ಕ್ರಿಕೆಟ್ ಐರ್ಲೆಂಡ್ ಪಂದ್ಯವನ್ನು ಸ್ಥಗಿತಗೊಳಿಸಲು ಒಪ್ಪಿಕೊಂಡಿವೆ.
"ಎಮಿರೇಟ್ಸ್ ಕ್ರಿಕೆಟ್ ಮಂಡಳಿಯು ತಮ್ಮ ಸಿಬ್ಬಂದಿಗಳಲ್ಲಿ ಕೋವಿಡ್-19 ಪ್ರಕರಣಗಳಿಲ್ಲ ಎಂದು ವರದಿ ಮಾಡಿದ್ದರೂ, ಯುಎಇ ಸಾರ್ವಜನಿಕ ಆರೋಗ್ಯ ನಿರ್ದೇಶನಗಳು ಈ ಹಂತದಲ್ಲಿ ಯುಎಇ ಮತ್ತು ಐರ್ಲೆಂಡ್ ನಡುವೆ ಸ್ಪರ್ಧಾತ್ಮಕ ಕ್ರಮವನ್ನು ಪುನಾರಂಭಿಸಲು ಅನುಮತಿಸಿಲ್ಲ. ಇಸಿಬಿ ಮತ್ತು ಐರ್ಲೆಂಡ್ ಕ್ರಿಕೆಟ್ ಎರಡೂ ಕೂಡ ಇಂದು ನಿಗದಿಯಾಗಿದ್ದ ಏಕದಿನ ಪಂದ್ಯವನ್ನು ಅಮಾನತುಗೊಳಿಸಲು ಒಪ್ಪಿಕೊಂಡಿವೆ. ಆದರೆ ಸೋಮವಾರ ಪಂದ್ಯ ನಡೆಯುವ ಸಾಧ್ಯತೆಗಳಿವೆ ಎಂದು ಕ್ರಿಕೆಟ್ ಐರ್ಲೆಂಡ್ ಹೇಳಿಕೆಯಲ್ಲಿ ತಿಳಿಸಿದೆ.
ಯುಎಇ ತಂಡದ ಆಟಗಾರ ಅಲಿಶನ್ ಶರಾಫು ಅವರಿಗೆ ಕೊರೊನಾ ಸೋಂಕು ಪತ್ತೆಯಾದ ನಂತರ ಯುಎಇ ಮತ್ತು ಐರ್ಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯವನ್ನು ಮುಂದೂಡಲಾಗಿತ್ತು. ಚಿರಾಗ್ ಸೂರಿ ಹಾಗೂ ಆರ್ಯನ್ ಲಾಕ್ರಾ ಅವರ ನಂತರ ಯುಎಇ ತಂಡದ ಮೂರನೇ ಆಟಗಾರನಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು.