ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್‌ನ ಆಟಗಾರರು ಮತ್ತು ಇತರೆ ಸಿಬ್ಬಂದಿ ಸೇರಿದಂತೆ 12 ಮಂದಿಗೆ ಕೊರೊನಾ ಸೋಂಕು ತಗುಲಿರುವ ಕಾರಣ ಐಪಿಎಲ್ ವೇಳಾಪಟ್ಟಿ ಬಿಡುಗಡೆಯನ್ನು ತಡೆ ಹಿಡಿಯಲಾಗಿದೆ.
ಸಿಎಸ್ಕೆ ಆಟಗಾರರಿಗೆ ಸೋಂಕು ತಗುಲಿರುವುದರಿಂದ ಇಂಡಿಯನ್ ಪ್ರೀಮಿಯರ್ ಲೀಗ್ಗೆ ತಕ್ಷಣ ಯಾವುದೇ ಆಪತ್ತು ಇಲ್ಲ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೇಳಿದೆ.
ನಿಯಮದ ಪ್ರಕಾರ, ಸೋಂಕಿಗೆ ತುತ್ತಾದ ಆಟಗಾರ 14 ದಿನಗಳ ಕಾಲ ಕ್ವಾರಂಟೈನ್ ಅವಧಿ ಮುಗಿದ ನಂತರವೇ ತರಬೇತಿಗೆ ಮರಳಬಹುದು. ತನ್ನ ಸಂಪರ್ಕ ತಡೆಯನ್ನು ಪೂರ್ಣಗೊಳಿಸಿದ ನಂತರ ಜೈವಿಕ-ಸುರಕ್ಷಿತ ವಲಯವನ್ನು ಮತ್ತೆ ಪ್ರವೇಶಿಸಲು ಅನುಮತಿಸುವ ಮೊದಲು ಆಟಗಾರನನ್ನು ಮತ್ತೆ ಪರೀಕ್ಷಿಸಲಾಗುತ್ತದೆ.
"ಪರಿಸ್ಥಿತಿಯನ್ನು ನಿಭಾಯಿಸಲು ಸಾಕಷ್ಟು ಕ್ರಮಗಳು ಜಾರಿಯಲ್ಲಿವೆ ಮತ್ತು ಪಂದ್ಯಾವಳಿಗೆ ತಕ್ಷಣದ ಆಪತ್ತಿಲ್ಲ. ಆದರೆ ಈ ಬೆಳವಣಿಗೆಯಿಂದಾಗಿ ವೇಳಾಪಟ್ಟಿ ಘೋಷಣೆ ವಿಳಂಬವಾಗಿದೆ” ಎಂದು ಬಿಸಿಸಿಐನ ಉನ್ನತ ಮೂಲಗಳು ತಿಳಿಸಿವೆ.
ಮೂರು ಬಾರಿ ಐಪಿಎಲ್ ಚಾಂಪಿಯನ್ ಸಿಎಸ್ಕೆ ತಂಡ ಯುಎಇಗೆ ತೆರಳುವ ಮೊದಲು ಭಾರತದಲ್ಲಿ ತಮ್ಮದೇ ಆದ ಶಿಬಿರವನ್ನು ಆಯೋಜಿಸಿತ್ತು. ಈ ಕ್ರಮ ಬಿಸಿಸಿಐಗೆ ಇಷ್ಟವಿರಲಿಲ್ಲ ಎಂದು ತಿಳಿದು ಬಂದಿದೆ.
"ಭಾರತದಲ್ಲಿ ಅಂತಹ ಶಿಬಿರವನ್ನು ನಡೆಸುವ ಅಪಾಯಗಳ ಬಗ್ಗೆ ಹಿರಿಯ ಬಿಸಿಸಿಐ ಅಧಿಕಾರಿಗಳು ಸಿಎಸ್ಕೆಗೆ ಎಚ್ಚರಿಕೆ ನೀಡಿದ್ದರು" ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.