ಮುಂಬೈ: ಕೋವಿಡ್-19ನಿಂದ ಮೊಟಕುಗೊಂಡಿರುವ ದೇಶಿ ಋತುವನ್ನು ಮುಂದಿನ ವರ್ಷ ಜನವರಿಯಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟಿ-20 ರಾಷ್ಟ್ರೀಯ ಚಾಂಪಿಯನ್ಶಿಪ್ ಆಯೋಜನೆ ಮೂಲಕ ಆರಂಭಿಸಲು ಬಿಸಿಸಿಐ ಆಲೋಚಿಸುತ್ತಿದೆ ಎನ್ನಲಾಗಿದೆ.
ಮುಂದಿನ ವರ್ಷದ ಐಪಿಎಲ್ಗಾಗಿ ನಡೆಯುವ ಹರಾಜು ಪ್ರಕ್ರಿಯೆಯನ್ನು ಗಮನದಲ್ಲಿಟ್ಟಿಕೊಂಡು ಬಿಸಿಸಿಐ ಈ ನಿರ್ಧಾರ ಕೈಗೊಳ್ಳುತ್ತಿದೆ ಎಂದು ತಿಳಿದು ಬಂದಿದೆ. ಇದಕ್ಕು ಮೊದಲು ರಣಜಿ ಟೂರ್ನಿ ಆಯೋಜಿಸಲು ತೀರ್ಮಾನಿಸಿತ್ತು.
ಕನಿಷ್ಠ ಮೂರು ತಂಡಗಳಿಗೆ ಬಯೋಬಬಲ್ ವಾತಾವರಣವನ್ನು ಸೃಷ್ಟಿಸಲು ಸಮರ್ಥವಿರುವ ರಾಜ್ಯಗಳನ್ನ ಬಿಸಿಸಿಐ ಎದುರು ನೋಡುತ್ತಿದೆ. ಈಗಾಗಲೇ ಹಲವು ಮೈದಾನಗಳನ್ನು ಮತ್ತು 5 ಸ್ಟಾರ್ ಹೋಟೆಲ್ಗಳನ್ನು ಹೊಂದಿರುವ ಕೆಲವು ರಾಜ್ಯಗಳ ಅಸೋಸಿಯೇಷನ್ಗಳಿಗೆ ಈ ಕುರಿತು ಪತ್ರ ಬರೆದಿದೆ ಎಂದು ತಿಳಿದು ಬಂದಿದೆ.
"ಹೌದು, ಐಪಿಎಲ್ ಹರಾಜು ಭಾರತೀಯ ಪ್ರತಿಭೆಗಳು ದುರ್ಬಲವಾಗಿರುವ ಕನಿಷ್ಠ ಎರಡು ಮೂರು ತಂಡಗಳಿಗೆ ಮುಖ್ಯವಾಗಲಿದೆ. ಹಾಗಾಗಿ ಹೊಸ ಪ್ರತಿಭೆಗಳನ್ನು ನೋಡುವುದಕ್ಕೆ ಐಪಿಎಲ್ಗೆ ಸಂಪೂರ್ಣ ಅವಶ್ಯಕತೆಯಿದೆ. ಆದ್ದರಿಂದ ರಣಜಿ ಟ್ರೋಫಿಗೆ ಮುಂಚಿತವಾಗಿ ಮುಷ್ತಾಕ್ ಅಲಿ ಟೂರ್ನಿ ನಡೆಯುತ್ತದೆ ಎಂಬುದು ತಾರ್ಕಿಕ ಸಂಗತಿಯಾಗಿದೆ" ಎಂದು ರಾಜ್ಯ ಘಟಕದ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಸಯ್ಯದ್ ಮುಷ್ತಾಕ್ ಅಲಿ ಟೂರ್ನಮೆಂಟ್ ಅಯೋಜನೆಗಾಗಿ ಬಿಸಿಸಿಐ ಕಡಿಮೆಯೆಂದರೂ ಮೂರು ಕ್ರೀಡಾಂಗಣಗಳನ್ನು ಹಾಗೂ ಹತ್ತಿರದಲ್ಲೇ 5 ಸ್ಟಾರ್ ಹೋಟೆಲ್ ಸೌಲಭ್ಯ ಹೊಂದಿರುವ ರಾಜ್ಯ ಸಂಸ್ಥೆಗಳನ್ನು ಎದುರು ನೋಡುತ್ತಿದೆ ಎಂದು ಆ ಅಧಿಕಾರಿ ತಿಳಿಸಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ಬೆಂಗಾಲ್ ಕ್ರಿಕೆಟ್ ಅಸೋಸಿಯೇಸನ್ ನ್ಯಾಷನಲ್ ಟಿ-20 ಚಾಂಪಿಯನ್ಶಿಪ್ ಆಯೋಜಿಸಲು ಸಿದ್ಧವಿರುವ ಸಂಭಾವ್ಯ ಕ್ರಿಕೆಟ್ ಸಂಸ್ಥೆ ಎನ್ನಲಾಗುತ್ತಿದೆ. ಏಕೆಂದರೆ ಕೋಲ್ಕತ್ತಾದಲ್ಲಿ ಈಡೆನ್ ಗಾರ್ಡನ್, ಜೆಯು ಮತ್ತು ಕಲ್ಯಾಣಿ ಕ್ರಿಡಾಂಗಣಗಳಿವೆ.