ದುಬೈ: ಸೋಲಿನ ಸರಪಳಿಯನ್ನು ಕಿತ್ತು ಬಿಸಾಡಿ ಬಲಿಷ್ಠ ತಂಡಗಳಾದ ಆರ್ಸಿಬಿ ಮತ್ತು ಮುಂಬೈ ಇಂಡಿಯನ್ಸ್ ತಂಡಗಳನ್ನು ಬಗ್ಗುಬಡಿದಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಮಂಗಳವಾರ ಅಗ್ರಸ್ಥಾನಿ ಡೆಲ್ಲಿ ವಿರುದ್ಧ ಕಣಕ್ಕಿಳಿಯುತ್ತಿದೆ.
ಟೂರ್ನಿಯಲ್ಲಿ 10 ಪಂದ್ಯಗಳಲ್ಲಿ 3 ಗೆಲುವು ಹಾಗೂ 6 ಸೋಲು ಕಂಡಿರುವ ರಾಹುಲ್ ನೇತೃತ್ವದ ತಂಡ ಕಳೆದ 2 ಪಂದ್ಯಗಳ ಗೆಲುವಿನ ಆತ್ಮವಿಶ್ವಾಸದಿಂದ ಡೆಲ್ಲಿ ವಿರುದ್ಧ ಕಣಕ್ಕಿಳಿಯಲಿದೆ. ಈಗಾಗಲೆ ಮೊದಲ ಪಂದ್ಯದಲ್ಲಿ ಡೆಲ್ಲಿ ತಂಡದ ವಿರುದ್ಧ ಪ್ರಬಲ ಪೈಪೋಟಿಯ ಹೊರೆತಾಗಿಯೂ ಸೂಪರ್ ಓವರ್ನಲ್ಲಿ ಸೋಲು ಕಂಡು ನಿರಾಶೆಯನುಭವಿಸಿತ್ತು. ಇದೀಗ ಸೇಡಿನ ಜೊತೆಗೆ ಪ್ಲೇ ಆಫ್ ಗೆ ನಿರ್ಣಾಯಕ ಪಂದ್ಯವಾಗಿರುವುದರಿಂದ ಇಂದಿನ ಪಂದ್ಯ ಪಂಜಾಬ್ ತಂಡಕ್ಕೆ ಮಹತ್ವದ್ದಾಗಿದೆ.
ಆದರೆ ತಂಡದ ಬಹುದೊಡ್ಡ ದೌರ್ಬಲ್ಯವೆಂದರೆ ರಾಹುಲ್ ಹಾಗೂ ಮಯಾಂಕ್ ಅಗರ್‌ವಾಲ್ ಹೊರೆತು ಪಡಿಸಿದರೆ ಬೇರೆ ಯಾವ ಬ್ಯಾಟ್ಸ್ಮನ್ಗಳು ಸ್ಥಿರಪ್ರದರ್ಶನ ತೋರದಿರುವುದು. ಆದರೆ ಕ್ರಿಸ್ ಗೇಲ್ ಬಂದಮೇಲೆ ಇವರಿಬ್ಬರ ಮೇಲಿನ ಒತ್ತಡ ಸ್ಪಲ್ಪ ಕಡಿಮೆಯಾಗಿದೆ. ಪೂರನ್ ಮತ್ತು ಮ್ಯಾಕ್ಸ್‌ವೆಲ್ ತಮ್ಮ ಸಾಮರ್ಥ್ಯವನ್ನು ಇಂದಿನ ಪಂದ್ಯದಲ್ಲಾದರೂ ತೋರಿಸಿದರೆ ಪಂಜಾಬ್ಗೆ ಗೆಲುವು ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಇನ್ನು 14 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿರುವ ಡೆಲ್ಲಿ ತಂಡಕ್ಕೆ ಈ ಪಂದ್ಯ ತನ್ನ ಗೆಲುವಿನ ಓಟವನ್ನು ಮುಂದುವರಿಸಿ ಅಗ್ರಸ್ಥಾನವನ್ನು ಕಾಪಾಡಿಕೊಳ್ಳುವತ್ತಾ ಗಮನ ಹರಿಸಿದೆ.
ಸ್ಥಿರತೆ ಕಾಣದೆ ಒದ್ದಾಡುತ್ತಿದ್ದ ಧವನ್ ಕಳೆದ ಮೂರು ಪಂದ್ಯಗಳಲ್ಲಿ 50 ಕ್ಕೂ ಹೆಚ್ಚುರನ್ ಬಾರಿಸಿ ಅದ್ಭುತ ಲಯದಲ್ಲಿದ್ದಾರೆ. ಶ್ರೇಯಸ್ ಹಾಗೂ ಸ್ಟೋಯ್ನಿಸ್ ಉತ್ತಮ ಪ್ರದರ್ಶನ ತೋರುವುದರಲ್ಲಿ ಯುಶಸ್ವಿಯಾಗಿದ್ದಾರೆ. ಆದರೆ ಯುವ ಆಟಗಾರ ಪೃಥ್ವಿ ಶಾ ಮತ್ತು ಅನುಭವಿ ರಹಾನೆಯಿಂದ ಕಳೆದ 2 ಪಂದ್ಯಗಳಿಂದ ರನ್ಗಳಿಸಿದರೆ ವಿಕೆಟ್ ಒಪ್ಪಿಸಿರುವುದು ತಂಡಕ್ಕೆ ಹಿನ್ನಡೆಯಾಗಿದೆ.
ಆದರೆ ಡೆಲ್ಲಿ ಬೌಲಿಂಗ್ ಟೂರ್ನಿಯಲ್ಲೇ ಬಲಿಷ್ಠವಾಗಿದ್ದು ತಂಡದ ಯಶಸ್ಸಿಗೆ ಕಾರಣವಾಗಿದೆ. ರಬಡಾ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ನಾರ್ಟ್ಜ್ ತಮ್ಮ ವೇಗದ ಬೌಲಿಂಗ್ನಿಂದ ಬ್ರೇಕ್ ಥ್ರೋ ನೀಡುತ್ತಿದ್ದಾರೆ. ಸ್ಪಿನ್ ವಿಭಾಗದಲ್ಲಿ ಅಶ್ವಿನ್ ಹಾಗೂ ಅಕ್ಸರ್ ಪಟೇಲ್ ತಮ್ಮ ಸ್ಥಿರ ಪ್ರದರ್ಶನದಿಂದ ಎದುರಾಳಿ ತಂಡಗಳ ರನ್ಗತಿಗೆ ಕಡಿವಾಣ ಹಾಕುತ್ತಿದ್ದಾರೆ. ಈ ಬೌಲಿಂಗ್ ಘಟಕ ನಿಜಕ್ಕೂ ಪಂಜಾಬ್ ತಂಡಕ್ಕೆ ಕಬ್ಬಿಣದ ಕಡೆಲೆಯಾದರೆ ಅತಿಶಯೋಕ್ತಿಯಲ್ಲ.
ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಶಿಖರ್ ಧವನ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್ (ನಾಯಕ), ಮಾರ್ಕಸ್ ಸ್ಟೋಯ್ನಿಸ್, ಅಲೆಕ್ಸ್ ಕ್ಯಾರಿ, ಅಕ್ಷರ್ ಪಟೇಲ್, ಆರ್. ಅಶ್ವಿನ್, ತುಷಾರ್ ದೇಶ್‌ಪಾಂಡೆ, ಕಗಿಸೊ ರಬಾಡ, ಎನ್ರಿಚ್ ನಾರ್ಟ್ಜ್
ಕಿಂಗ್ಸ್ ಇಲೆವವೆನ್ ಪಂಜಾಬ್: ಕೆ ಎಲ್ ರಾಹುಲ್ (ನಾಯಕ), ಮಯಾಂಕ್ ಅಗರ್‌ವಾಲ್, ಕ್ರಿಸ್ ಗೇಲ್, ನಿಕೋಲಸ್ ಪೂರನ್, ಗ್ಲೆನ್ ಮ್ಯಾಕ್ಸ್‌ವೆಲ್, ದೀಪಕ್ ಹೂಡಾ, ಕ್ರಿಸ್ ಜೋರ್ಡನ್, ಮುರುಗನ್ ಅಶ್ವಿನ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯಿ, ಆರ್ಶ್‌ದೀಪ್ ಸಿಂಗ್.