ದುಬೈ : ರಾಜಸ್ಥಾನ್ ರಾಯಲ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಜೋಸ್ ಬಟ್ಲರ್ ಕ್ವಾರಂಟೈನ್ ಮುಗಿಸಿದ್ದಾರೆ. ಭಾನುವಾರ ಕೆ ಎಲ್ ರಾಹುಲ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಕಣಕ್ಕಿಳಿಯಲು ಉತ್ಸಾಹದಿಂದಿರುವುದಾಗಿ ಹೇಳಿದ್ದು, ಆ ಪಂದ್ಯ ನಿಜಕ್ಕೂ ಸವಾಲಿನಾದ್ದಾಗಿರಲಿದೆ ಎಂದು ಹೇಳಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಸೆಪ್ಟೆಂಬರ್ 27ರ ಭಾನುವಾರದಂದು ಚೆನ್ನೈಗೆ ಸೋಲುಣಿಸಿದ್ದ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲೇ ಪಂಜಾಬ್ ತಂಡದ ವಿರುದ್ಧ ಕಾದಾಡಲಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಕ್ವಾರಂಟೈನ್ನಲ್ಲಿದ್ದಿದ್ದರಿಂದ ಬಟ್ಲರ್ ಮೊದಲ ಪಂದ್ಯ ತಪ್ಪಿಸಿಕೊಂಡಿದ್ದರು. ಇವರ ಅನುಪಸ್ಥಿತಿಯಲ್ಲಿ ಸ್ಟಿವ್ ಸ್ಮಿತ್ ಇನ್ನಿಂಗ್ಸ್ ಆರಂಭಿಸಿದ್ದರು. ಸಾಮ್ಸನ್ ಹಾಗೂ ಸ್ಮಿತ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ್ದರಿಂದ ಬಟ್ಲರ್ ಅನುಪಸ್ಥಿತಿ ಕಂಡಿರಲಿಲ್ಲ.
ಇದೀಗ ಇಂಗ್ಲೆಂಡ್ ಆಟಗಾರನ ಸೇರ್ಪಡೆಯಿಂದ ಮತ್ತಷ್ಟು ಬಲಿಷ್ಟವಾಗಿರುವುದರಿಂದ ನಾಳಿನ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿರಲಿದೆ. "ಮೊದಲ ಪಂದ್ಯದಲ್ಲಿ ಗೆಲುವು ಪಡೆದಿರುವುದು ಅದ್ಭುತ. ತಂಡ ಕೂಡ ಉತ್ತಮವಾಗಿ ಆಡಿದೆ. ಇಂತಹ (ಯುಎಇ)ಕಠಿಣ ಪರಿಸ್ಥಿತಿಯಲ್ಲಿ ತಂಡದ ಅತ್ಯುತ್ತಮ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ಅದ್ಭುತವಾಗಿತ್ತು. ಇಲ್ಲಿ ನಾನು ಮೊದಲ ಪಂದ್ಯವಾಡಲು ನಿಜವಾಗಿಯೂ ಉತ್ಸುಕನಾಗಿದ್ದೇನೆ. ಹುಡುಗರೊಟ್ಟಿಗೆ ತರಬೇತಿಗೆ ಮರಳಿರುವುದು ಸಂತಸ ತಂದಿದೆ. ತಂಡದ ಸುತ್ತಮುತ್ತಲಿನ ವಾತಾವರಣ ಮತ್ತು ಸಾಮರ್ಥ್ಯ ಉತ್ತಮವಾಗಿದೆ.
ಲೀಗ್ನ ಮೊದಲ ಪಂದ್ಯದಲ್ಲೇ ಜಯ ಪಡೆದಿರುವುದರಿಂದ ತಂಡದ ವಿಶ್ವಾಸ ಹೆಚ್ಚಿಸಿದೆ" ಎಂದು ರಾಜಸ್ಥಾನ್ ರಾಯಲ್ಸ್ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಬಟ್ಲರ್ ಹೇಳಿಕೊಂಡಿದ್ದಾರೆ. ತರಬೇತಿ ತುಂಬಾ ಶಕ್ತಿಯುತವಾಗಿದೆ. ಹುಡುಗರು ಉತ್ಸಾಹಭರಿತರಾಗಿದ್ದು, ಪರಸ್ಪರ ಕಂಪನಿಯನ್ನು ಆನಂದಿಸುತ್ತಿದ್ದಾರೆ. ಹಾಗಾಗಿ, ಮುಂದಿನ ಪಂದ್ಯದಲ್ಲಿ ಕಠಿಣ ಸವಾಲನ್ನು ಎದುರಿಸಲು ಉತ್ಸಾಹದಿಂದ ಕಾಯುತ್ತಿದ್ದಾರೆ.
ಪಂಜಾಬ್ ಖಂಡಿತ ಅದ್ಭುತ ತಂಡವಾಗಿದೆ. ಕೆ ಎಲ್ ರಾಹುಲ್ ಅಸಾಧಾರಣ ಫಾರ್ಮ್ನಲ್ಲಿದ್ದಾರೆ. ಆರ್ಸಿಬಿ ವಿರುದ್ಧ ಅವರ ಪ್ರದರ್ಶನ ಭಯಂಕರವಾಗಿತ್ತು. ಅವರ ವಿಕೆಟ್ ಯಾವಾಗಲೂ ಪ್ರಮುಖವಾಗಿರುತ್ತದೆ. ಶಾರ್ಜಾ ಸಣ್ಣ ಬೌಂಡರಿಯ ಕ್ರೀಡಾಂಗಣವಾಗಿದೆ. ನಾಳಿನ ಪಂದ್ಯ ಕೂಡ ಹೆಚ್ಚು ಸ್ಕೋರ್ಗಳ ಪಂದ್ಯವಾಗಲಿದೆ ಎಂದು ನಾನು ಭಾವಿಸುತ್ತೇನೆ, ನನಗೆ ಮೈದಾನಕ್ಕಿಳಿಯಲು ಕಾಯಲಾಗುತ್ತಿಲ್ಲ ಎಂದು ಬಟ್ಲರ್ ಹೇಳಿದ್ದಾರೆ. ಬಟ್ಲರ್ ತಂಡಕ್ಕೆ ಸೇರ್ಪಡೆಗೊಂಡಿರುವುದರಿಂದ ಟಾಮ್ ಕರ್ರನ್ ಅಥವಾ ಡೇವಿಡ್ ಮಿಲ್ಲರ್ ತಂಡದಿಂದ ಹೊರ ಬೀಳಲಿದ್ದಾರೆ.