ಆ್ಯಂಟಿಗುವಾ: ಭಾರತ ತಂಡದಲ್ಲಿ ಸದ್ಯದ ಮಟ್ಟಿಗೆ ರೋಹಿತ್ ಶರ್ಮಾ ಟೆಸ್ಟ್ ತಂಡದಲ್ಲಿ ಅವಕಾಶ ಪಡೆದಿಲ್ಲದೇ ಇರೋದು ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ. ಅದಕ್ಕೆ ಕಾರಣ ಏನು ಅಂತಾ ಸ್ವತಃ ನಾಯಕ ವಿರಾಟ್ ಕೊಹ್ಲಿಯೇ ತಿಳಿಸಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ಗೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ರೋಹಿತ್ ಶರ್ಮಾಗೆ ಅವಕಾಶ ನೀಡಿರಲಿಲ್ಲ. ರೋಹಿತ್ಗೆ ಅವಕಾಶ ನೀಡಬೇಕಾದರೆ ವಿಹಾರಿ ಅಥವಾ ರಹಾನೆಯನ್ನು ತಂಡದಿಂದ ಕೈಬಿಡಬೇಕಿತ್ತು. ಆದರೆ, ಟೆಸ್ಟ್ ತಂಡದ ಉಪನಾಯಕ ರಹಾನೆ ಟೆಸ್ಟ್ ಕ್ರಿಕೆಟ್ ಸ್ಪೆಷಲಿಸ್ಟ್ ಆದ್ದರಿಂದ ಅವರನ್ನು ಬಿಡಲಾಗಲಿಲ್ಲ. ಆದರೆ, ರೋಹಿತ್ ಕಡೆಗಣಿಸಿ ಯುವ ಆಟಗಾರ ವಿಹಾರಿಗೆ ಚಾನ್ಸ್ ನೀಡಲಾಗಿತ್ತು.
ರೋಹಿತ್ ಬದಲು ವಿಹಾರಿಗೆ ಅವಕಾಶ ಕೊಟ್ಟಿದ್ದಕ್ಕೆ ಕೊಹ್ಲಿ ಕಾರಣ ಬಹಿರಂಗಪಡಿಸಿದ್ದಾರೆ. 11 ಆಟಗಾರರನ್ನು ಆಯ್ಕೆ ಮಾಡುವಾಗ ಅವರು ಯಾವ ವಿಭಾಗದಲ್ಲಿ ಪರಿಣಿತಿ ಪಡೆದಿದ್ದಾರೆಂದು ಆಲೋಚಿಸಿ ಆಯ್ಕೆ ಮಾಡಲಾಗುತ್ತದೆ. ವಿಹಾರಿ ಆಯ್ಕೆ ಮಾಡಿದ್ದು ಅವರೊಬ್ಬ ಆಲ್ರೌಂಡರ್ ಎಂಬ ದೃಷ್ಟಿಕೋನದಿಂದ. ಓವರ್ ರೇಟ್ ತಗ್ಗಿಸಬೇಕೆಂದರೆ ನಮಗೊಬ್ಬ ಸ್ಪಿನ್ ಬೌಲರ್ ಅಗತ್ಯವಿತ್ತು. ಅದಕ್ಕಾಗಿ ವಿಹಾರಿಯವರನ್ನು ಆಯ್ಕೆ ಮಾಡಲಾಗಿತ್ತು. ಇದರಲ್ಲಿ ಒಬ್ಬ ವ್ಯಕ್ತಿಯ ಅಭಿಪ್ರಾಯವಿರುವುದಿಲ್ಲ. ತಂಡದ ಅಭಿಪ್ರಾಯವನ್ನು ಕೇಳಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಪಂದ್ಯದಲ್ಲಿ ವಿಹಾರಿ ಮೊದಲ ಇನ್ನಿಂಗ್ಸ್ನಲ್ಲಿ 32 ಹಾಗೂ 2ನೇ ಇನ್ನಿಂಗ್ಸ್ನಲ್ಲಿ 93 ರನ್ಗಳಿಸಿ ಮಿಂಚಿ ಕೊಹ್ಲಿ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು.