ರಾಂಚಿ: ಭಾರತ ಮತ್ತು ಪ್ರವಾಸಿ ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯಕ್ಕೆ ವರುಣ ಅಡ್ಡಿ ಪಡಿಸಿದ್ದು, ಮೊದಲ ದಿನದಾಟ ಮುಕ್ತಾಯಗೊಂಡಿದ್ದು, ರೋಹಿತ್ ಶರ್ಮಾ ಸಿಡಿಸಿದ ಭರ್ಜರಿ ಶತಕದ ನೆರವಿನಿಂದ ಟೀಂ ಇಂಡಿಯಾ ಸುಭದ್ರ ಸ್ಥಿತಿಯಲ್ಲಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾಕ್ಕೆ ಆರಂಭಿಕ ಆಘಾತ ಎದುರಾಯ್ತು. ತಂಡದ ಮೊತ್ತ ಎರಡಂಕಿ ದಾಟುವಷ್ಟರಲಲ್ಲಿ ಭರವಸೆಯ ಆಟಗಾರ ಮಯಾಂಕ್ ಅಗರ್ವಾಲ್, ರಬಾಡ ಎಸೆತದಲ್ಲಿ ಔಟ್ ಆದ್ರು. ಇತ್ತ ಚೆತೇಶ್ವರ್ ಪುಜಾರ ಕೂಡ ಸೊನ್ನೆ ಸುತ್ತಿ ಬಂದಷ್ಟೆ ವೇಗವಾಗಿ ಪೆವಿಲಿಯನ್ ಸೇರಿದ್ರು. 2ನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ್ದ ನಾಯಕ ವಿರಾಟ್ ಕೊಹ್ಲಿ ಕೂಡ ಹೆಚ್ಚು ಹೊತ್ತು ಕ್ರೀಸ್ ಕಚ್ಚಿ ನಿಲ್ಲಲಿಲ್ಲ. 12 ರನ್ ಗಳಿಸಿದ್ದಾಗ ವೇಗಿ ನಾರ್ಟ್ಜೆ ಬೌಲಿಂಗ್ನಲ್ಲಿ ಎಲ್ಬಿಗೆ ಬಲಿಯಾದ್ರು.

ಕೇವಲ 39 ರನ್ಗಳಿಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಆರಂಭಿಕ ಆಟಗಾರ ರೋಹಿತ್ ಶರ್ಮಾ ಮತ್ತು ಅಜಿಂಕ್ಯಾ ರಹಾನೆ ಆಸರೆಯಾದ್ರು. ಹರಿಣಗಳ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ನಲ್ಲಿ 6ನೇ ಶತಕ ಸಿಡಿಸಿ ಮಿಂಚಿದ್ರು.

ಇತ್ತ ಜವಾಬ್ದಾರಿಯುತವಾಗಿ ಬ್ಯಾಟ್ ಬೀಸಿದ ಮಧ್ಯಮ ಕ್ರಮಾಂಕದ ಆಟಗಾರ ಅಜಿಂಕ್ಯಾ ರಹಾನೆ, ಟೆಸ್ಟ್ ಕ್ರಿಕೆಟ್ನಲ್ಲಿ 21ನೇ ಅರ್ಧ ಶತಕ ಸಿಡಿಸಿದ್ರು. ಮೊದಲ ದಿನದ ಆಟದ ಅಂತ್ಯಕ್ಕೆ ಟೀಂ ಇಂಡಿಯಾ 58 ಓವರ್ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 224 ರನ್ ಗಳಿಸಿದೆ. ರೋಹಿತ್ ಶರ್ಮಾ 117 ಮತ್ತು ಅಜಿಂಕ್ಯಾ ರಹಾನೆ 83 ರನ್ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.