ರಾಂಚಿ: ಟೀಂ ಇಂಡಿಯಾ ಬೌಲರ್ಗಳ ಸಂಘಟಿತ ಬೌಲಿಂಗ್ ಪ್ರದರ್ಶನಕ್ಕೆ ದಕ್ಷಿಣ ಆಫ್ರಿಕಾ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದ್ದು, ಮೂರನೇ ದಿನದಾಟದ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 132 ರನ್ ಗಳಿಸಿದೆ.
ಎರಡನೇ ದಿನದಾಟದ ಅಂತ್ಯಕ್ಕೆ ಮೊದಲ ಇನ್ನಿಂಗ್ಸ್ನಲ್ಲಿ 2 ವಿಕೆಟ್ ಕಳೆದುಕೊಂಡಿದ್ದ ಆಫ್ರಿಕನ್ನರು ಮೂರನೇ ದಿನ ಭಾರತೀಯ ಬೌಲರ್ಗಳ ದಾಳಿಗೆ ಬೆಚ್ಚಿ ಬಿದ್ದರು. ಮೊದಲ ಇನ್ನಿಂಗ್ಸ್ನಲ್ಲಿ 180 ರನ್ಗಳಿಗೆ ಗಳಿಸಿ ಪ್ರವಾಸಿ ತಂಡ ಆಲ್ಔಟ್ ಆಯಿತು. ಇದಾದ ಬಳಿಕ ಫಾಲೋಆನ್ ಹೇರಿದ ಟೀಂ ಇಂಡಿಯಾ ಹರಿಣಿಗಳಿಗೆ ಬ್ಯಾಟಿಂಗ್ ಮಾಡಲು ಆಹ್ವಾನ ನೀಡಿತು.
ಎರಡನೇ ಇನ್ನಿಂಗ್ಸ್ನಲ್ಲೂ ಬ್ಯಾಟಿಂಗ್ ಮಾಡಲು ಇಳಿದ ಡು ಪ್ಲೆಸಿಸ್ ಹುಡುಗರು ಟೀಂ ಇಂಡಿಯಾ ಬೌಲಿಂಗ್ ದಾಳಿ ಎದುರಿಸಲಾಗದೇ ವಿಕೆಟ್ ಒಪ್ಪಿಸಿದರು. ಯಾವೊಬ್ಬ ಆಟಗಾರರು ಕೂಡ 30ಕ್ಕಿಂತ ಹೆಚ್ಚು ರನ್ ಗಳಿಸಲಿಲ್ಲ. ಅಂತಿಮವಾಗಿ ಮೂರನೇ ದಿನದಾಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ ತಂಡ 8 ವಿಕೆಟ್ ಕಳೆದುಕೊಂಡು 132ರನ್ ಗಳಿಸಿದೆ. ಪ್ರವಾಸಿ ತಂಡದ ಮೇಲೆ ಸವಾರಿ ಮಾಡಿದ ವೇಗಿ ಮಹಮ್ಮದ್ ಶಮಿ 3 ವಿಕೆಟ್ ಪಡೆದ್ರೆ, ಉಮೇಶ್ ಯಾದವ್ 2, ರವೀಂದ್ರ ಜಡೇಜಾ 1 ಮತ್ತು ಅಶ್ವಿನ್ 1 ವಿಕೆಟ್ ಪಡೆದುಕೊಂಡಿದ್ದಾರೆ.
ಎರಡು ವಿಕೆಟ್ ಮಾತ್ರ ಬಾಕಿ ಉಳಿದಿರುವಂತೆಯೇ ದಕ್ಷಿಣ ಆಫ್ರಿಕಾ ಇನ್ನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು 203 ರನ್ ಗಳಿಸಬೇಕಿದೆ. ಇದರಿಂದಾಗಿ ಇನ್ನು ಎರಡು ದಿನಗಳು ಬಾಕಿ ಉಳಿದಿರುವಂತೆಯೇ ಭಾರತ ಸರಣಿ ಕ್ಲೀನ್ ಸ್ವೀಪ್ ಮಾಡುವುದು ಸುನಿಶ್ಚಿತವೆನಿಸಿದೆ.
ನಾಳೆ ಬೆಳಗ್ಗೆ ಪಂದ್ಯ ಆರಂಭವಾಗುತ್ತಿದ್ದಂತೆ ಟೀಂ ಇಂಡಿಯಾ ಎರಡು ವಿಕೆಟ್ ಪಡೆದುಕೊಂಡರೆ ಗೆಲುವು ಸಾಧಿಸುವ ಜತೆಗೆ ಟೆಸ್ಟ್ ಸರಣಿಯನ್ನ 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಳ್ಳಲಿದೆ.