ವಿಶಾಖಪಟ್ಟಣಂ: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಆರಂಭಿಕ ದಿನ ಮಳೆಯಿಂದಾಗಿ ರದ್ದಾಗಿದ್ದು, ರೋಹಿತ್ ಶರ್ಮಾ ಆಕರ್ಷಕ ಶತಕ (115) ಹಾಗೂ ಕನ್ನಡಿಗ ಮಯಾಂಕ್ ಅಗರವಾಲ್ (84) ರನ್ ನೆರವಿನಿಂದ 59.1 ಓವರ್ಗಳಲ್ಲಿ 202ರನ್ಗಳಿಕೆ ಮಾಡಿದ್ದು, ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದೆ.
ಆಂಧ್ರಪ್ರದೇಶದ ವೈ ಎಸ್ ರಾಜಶೇಖರ್ ರೆಡ್ಡಿ ಕ್ರಿಕೆಟ್ ಮೈದಾನದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿತು. ಟೆಸ್ಟ್ ಕ್ರಿಕೆಟ್ನಲ್ಲೂ ಆರಂಭಿಕನಾಗಿ ಕಣಕ್ಕಿಳಿದ ರೋಹಿತ್ ಶರ್ಮಾ 84 ಎಸೆತಗಳಲ್ಲಿ ಅರ್ಧಶತಕ ಹಾಗೂ 160 ಎಸೆತಗಳಲ್ಲಿ ಶತಕ ಪೂರೈಸಿದ್ದು 173 ಎಸೆತಗಳಲ್ಲಿ ಅಜೇಯ 115 ರನ್ ಗಳಿಸಿದ್ರು. ಇದು ರೋಹಿತ್ ಟೆಸ್ಟ್ ವೃತ್ತಿ ಜೀವನದ 4ನೇ ಟೆಸ್ಟ್ ಶತಕವಾಗಿದೆ.
ರೋಹಿತ್‌ಗೆ ಸಾಥ್ ನೀಡಿದ ಮಯಾಂಕ್ ಅಗರವಾಲ್ ಕೂಡ ಉತ್ತಮ ಪ್ರದರ್ಶನ ನೀಡಿದರು. ತಾವು ಎದುರಿಸಿದ 183 ಎಸೆತಗಳಲ್ಲಿ 11 ಬೌಂಡರಿ ಹಾಗೂ ಎರಡು ಸಿಕ್ಸರ್ ಸೇರಿ 84 ರನ್ ಗಳಿಸಿದ್ದು, ನಾಳೆಗೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ.
ಟೀಂ ಇಂಡಿಯಾ 202 ರನ್ಗಳಿಕೆ ಮಾಡುತ್ತಿದ್ದಂತೆ ಸುರಿದ ಮಳೆ ಹಾಗೂ ಮಂದ ಬೆಳಕಿನ ಕಾರಣದಿಂದಾಗಿ ಮೊದಲ ದಿನದಾಟ ರದ್ಧು ಪಡಿಸಲಾಗಿದೆ. ನಾಳೆ ಆಟ ಮುಂದುವರಿಯಲಿದೆ. ಇನ್ನು 30 ಓವರ್ಗಳ ಆಟ ಬಾಕಿ ಇದ್ದ ಕಾರಣ, ಟೀಂ ಇಂಡಿಯಾ ಬೃಹತ್ ಮೊತ್ತ ಪೇರಿಸುವ ಕನಸು ಕಾಣುತ್ತಿತ್ತು. ಆದರೆ ಇದಕ್ಕೆ ಮಳೆರಾಯ ಅಡ್ಡಿಪಡಿಸಿದ್ದಾನೆ.