ಬೆಂಗಳೂರು: ಭಾರತ ತಂಡ ವಿಶ್ವದ ಅತ್ಯಂತ ಬಲಿಷ್ಠ ತಂಡಗಳಲ್ಲೊಂದು. ಭಾರತದಲ್ಲಿ ಅವರನ್ನು ಎದುರಿಸುವುದೆಂದರೆ ಅತ್ಯಂತ ಕಠಿಣ ಸವಾಲಾಗಿದೆ ಎಂದು ದಕ್ಷಿಣ ಅಫ್ರಿಕಾದ ಆಲ್ರೌಂಡರ್ ರಾಸ್ಸಿ ವಾನ್ ಡರ್ ಡಾಸ್ಸೆನ್ ಅಭಿಪ್ರಾಯಪಟ್ಟಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಬೆಂಗಳೂರಿನಲ್ಲಿ ಇಂದು ಅಂತಿಮ ಪಂದ್ಯ ನಡೆಯಲಿದ್ದು, ಸರಣಿಯಲ್ಲಿ ಸಮಬಲ ಸಾಧಿಸಲು ಹರಿಣಗಳು ಈ ಪಂದ್ಯವನ್ನು ಗೆಲ್ಲಲೇಬೇಕಿದೆ. ಆದರೆ ಭಾರತ ತಂಡವನ್ನು ಮಣಿಸುವುದು ಅಷ್ಟು ಸುಲಭವಲ್ಲ ಅನ್ನುವುದು ಡಾಸ್ಸೆನ್ ಅಭಿಪ್ರಾಯವಾಗಿದೆ.
ಟೀಂ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಅವರಂತಹ ಚಾಂಪಿಯನ್ ಆಟಗಾರರಿದ್ದಾರೆ. ಅವರೆಲ್ಲರೂ ಟಿ20 ಸ್ಪೆಷಲಿಸ್ಟ್ಗಳು. ವಿರಾಟ್ ಹಾಗೂ ರೋಹಿತ್ ಟಿ20ಯಲ್ಲಿ ಗರಿಷ್ಠ ರನ್ ಗಳಿಸಿರುವ ಆಟಗಾರಾಗಿದ್ದು, ಇವರನ್ನು ಎದುರಿಸುವುದೇ ನಮಗೆ ದೊಡ್ಡ ಸವಾಲು ಎಂದಿದ್ದಾರೆ.
ಭಾರತ ತಂಡ ಯುವಕರಿಗೆ ಆದ್ಯತೆ ನೀಡಿದೆ. ಬೌಲರ್ಗಳು ಅಂತಾರಾಷ್ಟ್ರೀಯ ಕ್ರಿಕೆಟ್ ಅನುಭವವಿಲ್ಲದವರಾದರೂ ಐಪಿಎಲ್ನಂತಹ ಟಿ20 ಲೀಗ್ನಲ್ಲಿ ಆಡಿದ ಅನುಭವ ಇರುವುದರಿಂದ ಅವರು ಬೌಲಿಂಗ್ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಮೊದಲ ಟಿ20 ಪಂದ್ಯದಲ್ಲಿ ನಮ್ಮ ಗುರಿ 165 ಇತ್ತು. ಆದರೆ ಭಾರತೀಯ ಬೌಲರ್ಗಳು ಅತ್ಯುತ್ತಮವಾಗಿ ನಿಯಂತ್ರಿಸಿದರು. ಇದರಿಂದ 10-15ರನ್ಗಳು ಕಡಿಮೆಯಾಗಿ ಸೋಲಿಗೆ ಕಾರಣವಾಯಿತು ಎಂದು ಡಾಸ್ಸೆನ್ ತಿಳಿಸಿದ್ದಾರೆ.
ಇನ್ನು, ಸರಣಿ ಸಮಬಲ ಸಾಧಿಸಸಲು ಇಂದಿನ ಪಂದ್ಯ ಪ್ರಮುಖವಾಗಿದ್ದು, ಈ ಪಂದ್ಯ ಗೆದ್ದು ಸಮಬಲ ಸಾಧಿಸಲು ಹರಿಣಗಳು ಉತ್ತಮ ತಯಾರಿ ನಡೆಸಿದ್ದಾರೆ.