ದುಬೈ : ಇಂಡಿಯನ್ ಪ್ರೀಮಿಯರ್ ಲೀಗ್ನ 13ನೇ ಆವೃತ್ತಿಯ ಎಲಿಮಿನೇಟರ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಶುಕ್ರವಾರ ರಾತ್ರಿ ಸೋಲು ಕಂಡಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುಂಬರುವ ಆಸೀಸ್ ವಿರುದ್ಧದ ಸರಣಿಗೆ ರಚಿಸಲಾದ ಬಯೋ ಬಬಲ್ ಪ್ರವೇಶಿಸಿದ್ದಾರೆ.
ಎಸ್‌ಆರ್‌ಹೆಚ್ ವಿರುದ್ಧದ ಪಂದ್ಯದ ನಂತರ ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾದ ಆಟಗಾರರಿಗಾಗಿ ರಚಿಸಲಾದ ಬಯೋ ಬಬಲ್‌ಗೆ ವಿರಾಟ್ ಕೊಹ್ಲಿ ಎಂಟ್ರಿಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
"ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ನಂತರ ಕೊಹ್ಲಿ ಶುಕ್ರವಾರ ತಡರಾತ್ರಿ ಟೀಂ ಇಂಡಿಯಾ ಬಯೋ ಬಬಲ್‌ಗೆ ತೆರಳಿದರು. ಅವರು ಒಂದು ದಿನ ಅಥವಾ ಎರಡು ದಿನ ವಿಶ್ರಾಂತಿ ತೆಗೆದುಕೊಂಡು ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ತಯಾರಿ ಆರಂಭಿಸುವ ಸಾಧ್ಯತೆಯಿದೆ" ಎಂದು ಮೂಲಗಳು ತಿಳಿಸಿವೆ.
ಐಪಿಎಲ್ ಟೂರ್ನಿಯಲ್ಲಿ ತಮ್ಮ ತಂಡದ ಅಭಿಯಾನಗಳು ಮುಗಿದ ನಂತರ ಮಾಯಾಂಕ್ ಅಗರ್‌ವಾಲ್ ಮತ್ತು ಕೆಲ ಆಟಗಾರರು ಈಗಾಗಲೇ ಚೇತೇಶ್ವರ ಪೂಜಾರ ಮತ್ತು ಹನುಮ ವಿಹಾರಿ ಅವರೊಂದಿಗೆ ತರಬೇತಿ ಆರಂಭಿಸಿದ್ದಾರೆ. ಶುಕ್ರವಾರದಿಂದ ಟೀಂ ಇಂಡಿಯಾ ಆಟಗಾರರು ಪಿಂಕ್ ಬಾಲ್ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿದ್ದವು.