ಪೊಚೆಫ್‌ಸ್ಟ್ರೂಮ್(ದಕ್ಷಿಣ ಆಫ್ರಿಕಾ): ಭಾನುವಾರ ನಡೆಯಲಿರುವ ಐಸಿಸಿ ಅಂಡರ್-19 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾ ತಂಡಗಳು ಮುಖಾಮುಖಿಯಾಗಲಿವೆ. ವಿಶ್ವಕಪ್ ಪಂದ್ಯಾವಳಿಯಲ್ಲಿ ಮೂರನೇ ಬಾರಿ ಏಷ್ಯಾ ಖಂಡದ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ.
ಯಶಸ್ವಿ ಜೈಸ್ವಾಲ್ ಅವರ ಅದ್ಭುತ ಶತಕ ಮತ್ತು ಬೌಲರ್‌ಗಳ ಸಾಮೂಹಿಕ ಪ್ರಯತ್ನದಿಂದ ಭಾರತ ತಂಡ ಸೆಮಿಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಫೈನಲ್ ಪ್ರವೇಶಿಸಿತು. ಇತ್ತ ಬಾಂಗ್ಲಾದೇಶ ಕೂಡ ಕಿವಿಸ್ ತಂಡವನ್ನು 6 ವಿಕೆಟ್ಗಳಿಂದ ಮಣಿಸಿ ಮೊದಲ ಬಾರಿಗೆ ಪ್ರಶಸ್ತಿ ಸುತ್ತಿಗೆ ಆಯ್ಕೆಯಾಗಿದೆ.
ಪ್ರಿಯಂ ಗರ್ಗ್ ನೇತೃತ್ವದ ಭಾರತೀಯ ತಂಡವು ಟೂರ್ನಿಯಲ್ಲಿ ಅಜೇಯ ಪ್ರದರ್ಶನ ನೀಡಿದ್ದು, ಎದುರಾಳಿಗಳ ವಿರುದ್ಧ ಮೇಲುಗೈ ಸಾಧಿಸಿ ಸುಲಭವಾಗಿ ಫೈನಲ್ ತಲುಪಿತು. ಟೀಂ ಇಂಡಿಯಾ ಯುವ ಆಟಗಾರರು ದಾಖಲೆಯ ಐದನೇ ಬಾರಿ ಪ್ರಶಸ್ತಿ ಗೆಲ್ಲುವ ಸಲುವಾಗಿ ಗೆಲುವಿನ ಅಭಿಯಾನ ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ.
ಭಾರತದಂತೆಯೇ, ಅಕ್ಬರ್ ಅಲಿ ನೇತೃತ್ವದ ಬಾಂಗ್ಲಾದೇಶವೂ ಟೂರ್ನಿಯಲ್ಲಿ ಅಜೇಯರಾಗಿದ್ದು, ಯಾವುದೇ ಗುಂಪು ಕ್ರಿಕೆಟ್‌ನಲ್ಲಿ(ಹಿರಿಯರ ಏಕದಿನ, ಟಿ-20, ಕಿರಿಯರ ಏಕದಿನ, ಟಿ-20 ಸೇರಿದಂತೆ) ತಮ್ಮ ಮೊದಲ ವಿಶ್ವಕಪ್ ಗೆಲ್ಲುವ ಮೂಲಕ ಇತಿಹಾಸ ಬರೆಯುವ ಗುರಿ ಹೊಂದಿದೆ.
ಭಾರತ ತಮ್ಮ ಏಷ್ಯನ್ ಪ್ರತಿಸ್ಪರ್ಧಿಯಾದ ಬಾಂಗ್ಲಾದೇಶದ ಮೇಲೆ ಮೇಲುಗೈ ಸಾಧಿಸಿದೆ. ಏಕೆಂದರೆ ಟೀಂ ಇಂಡಿಯಾ ಇಲ್ಲಿಯವರೆಗೆ 23 ಬಾರಿ ಬಾಂಗ್ಲಾ ತಂಡವನ್ನ ಎದುರಿಸಿದ್ದು, 18 ಪಂದ್ಯಗಳಲ್ಲಿ ಜಯಶಾಲಿಯಾಗಿದೆ. ಬಾಂಗ್ಲಾದೇಶ ಕೇವಲ ಮೂರು ಬಾರಿ ಗೆದ್ದಿದ್ದು, 2 ಪಂದ್ಯ ರದ್ದಾಗಿವೆ.
ಅಂಡರ್-19 ವಿಶ್ವಕಪ್ನಲ್ಲಿ ಭಾರತ ಮತ್ತು ಬಾಂಗ್ಲಾ 4 ಬಾರಿ ಮುಖಾಮುಖಿಯಾಗಿದ್ದು ಇದರಲ್ಲಿ ಭಾರತ 3 ಮತ್ತು ಬಾಂಗ್ಲಾ ಒಂದು ಬಾರಿ ಗೆಲುವು ಸಾಧಿಸಿದೆ. ಅಂಕಿ ಅಂಶಗಳ ಪ್ರಕಾರ, ಭಾರತ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡವಾಗಿದ್ದರೂ, ಟೂರ್ನಿಯಲ್ಲಿ ಅಜೇಯ ದಾಖಲೆ ಹೊಂದಿರುವ ಬಾಂಗ್ಲಾ ತಂಡವನ್ನು ಕಡೆಗಣಿಸುವಂತಿಲ್ಲ.
ಸಂಭಾವ್ಯ ತಂಡಗಳು:
ಭಾರತ: ಯಶಸ್ವಿ ಜೈಸ್ವಾಲ್, ದಿವ್ಯಾನ್ಶ್ ಸಕ್ಸೇನಾ, ತಿಲಕ್ ವರ್ಮಾ, ಪ್ರಿಯಂ ಗರ್ಗ್ (ನಾಯಕ), ಧ್ರುವ್ ಜುರೆಲ್ (ಕೀಪರ್), ಸಿದ್ದೇಶ್ ವೀರ್, ಅಥರ್ವ ಅಂಕೋಲೆಕರ್, ರವಿ ಬಿಷ್ನೋಯ್, ಶಶ್ವತ್ ರಾವತ್, ಕಾರ್ತಿಕ್ ತ್ಯಾಗಿ, ಆಕಾಶ್ ಸಿಂಗ್, ವಿದ್ಯಾಧರ್ ಪಾಟೀಲ್, ಶುಭಾಂಗ್ ಹೆಗ್ಡೆ, ಸುಶಾಂತ್ ಮಿಶ್ರಾ, ಕುಮಾರ್ ಕುಶಾಗ್ರಾ
ಬಾಂಗ್ಲಾದೇಶ : ಪರ್ವೇಜ್ ಹೊಸೈನ್ ಎಮನ್, ತಾಂಜಿದ್ ಹಸನ್, ಮಹಮುದುಲ್ ಹಸನ್ ಜಾಯ್, ಟೌಹಿಡ್ ಹ್ರೀಡೊಯ್, ಶಹಾದತ್ ಹೊಸೈನ್, ಅಕ್ಬರ್ ಅಲಿ (ನಾಯಕ/ ಕೀಪರ್), ಶಮಿಮ್ ಹೊಸೈನ್, ರಾಕಿಬುಲ್ ಹಸನ್, ಶೋರಿಫುಲ್ ಇಸ್ಲಾಂ, ತಂಜಿಮ್ ಹಸನ್ ಸಕಿಬ್, ಹಸನ್ ಮುರಾದ್, ಮೃತ್ತುಂಜಯ್ ಚೌಧರಿ, ಅವಿಶೇಕ್ ದಾಸ್, ಪ್ರಾಂತಿಕ್ ನವ್ರೋಸ್ ನಬಿಲ್, ಶಾಹಿನ್ ಆಲಂ