ಪ್ರಿಟೋರಿಯಾ: ಹಾಲಿ ವಿಶ್ವಚಾಂಪಿಯನ್ ಭಾರತ ಅಂಡರ್ 19 ತಂಡ 2020 ಏಕದಿನ ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ 211 ರನ್ಗಳ ಬೃಹತ್ ಜಯ ಸಾಧಿಸುವ ಮೂಲಕ ಇತರೆ ತಂಡಗಳಿಗೆ ನಡುಕ ಹುಟ್ಟಿಸಿದೆ.
ಕಳೆದ ಎರಡು ಆವೃತ್ತಿಯ ಜೂನಿಯರ್ ವಿಶ್ವಕಪ್ನಲ್ಲಿ ಫೈನಲ್ ತಲುಪಿ ಒಮ್ಮೆ ಚಾಂಪಿಯನ್ ಆಗಿರುವ ಭಾರತ ತಂಡ ವಿಶ್ವಕಪ್ ಅಭ್ಯಾಸ ಪಂದ್ಯಗಳಲ್ಲಿ ತನ್ನ ಪ್ರಾಬಲ್ಯ ಮೆರೆದಿದೆ. ಶನಿವಾರ ನಡೆದ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ಮೊದಲು ಬ್ಯಾಟಿಂಗ್ ನಡೆಸಿ 6 ವಿಕೆಟ್ ಕಳೆದುಕೊಂಡು 255 ರನ್ ಗಳಿಸಿತು. ನಂತರ ತನ್ನ ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ಅಫ್ಘಾನಿಸ್ತಾನ ತಂಡವನ್ನು 44 ರನ್ಗಳಿಗೆ ಕಟ್ಟಿ ಹಾಕುವ ಮೂಲಕ 211 ರನ್ಗಳ ಜಯ ಸಾಧಿಸಿತು.
ಭಾರತದ ಪರ ಯಶಸ್ವಿ ಜೈಸ್ವಾಲ್ 69, ತಿಲಕ್ ವರ್ಮಾ 55, ಪ್ರಿಯಂ ಗರ್ಗ್ 36, ದ್ರುವ್ ಜುರೆಲ್ 21, ಕನ್ನಡಿಗ ಶುಬಾಂಗ್ ಹೆಗ್ಡೆ 25 ರನ್ ಗಳಿಸಿದರು. ಅಫ್ಘನ್ ಪರ ಅಬಿದ್ ಮೊಹಮ್ಮದಿ 3 ಹಾಗೂ ಫಜಲ್ ಹಕ್ 2, ಅಬ್ಧುಲ್ ರಹ್ಮನ್ 1 ವಿಕೆಟ್ ಪಡೆದರು.
256 ರನ್ಗಳ ಗುರಿ ಪಡೆದ ಅಫ್ಘಾನಿಸ್ತಾನ ಕೇವಲ 17.5 ಓವರ್ಗಳಲ್ಲಿ 44 ರನ್ಗಳಿಗೆ ಸರ್ವಪತನಗೊಂಡಿತು. 11 ರನ್ ಗಳಿಸಿದ ವಿಕೆಟ್ ಕೀಪರ್ ಮೊಹಮ್ಮದ್ ಇಶಾಕ್ ಗರಿಷ್ಠ ಸ್ಕೋರರ್ ಆದರು.
ಕಾರ್ತಿಕ್ ತ್ಯಾಗಿ 3 ವಿಕೆಟ್, ಆಕಾಶ್ ಸಿಂಗ್ 2 ವಿಕೆಟ್, ಸುಶಾಂತ್ ಮಿಶ್ರಾ 2 ವಿಕೆಟ್ ಹಾಗೂ ಶುಬಾಂಗ್ ಹೆಗ್ಡೆ 2 ವಿಕೆಟ್ ಪಡೆದು ಮಿಂಚಿದರು.
ಭಾರತ ತಂಡ ಮುಂದಿನ ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು ಎದುರಿಸಲಿದೆ.