ಲಂಡನ್: ಭಾರತ ತಂಡದ ರನ್ ಮಷಿನ್ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಐಸಿಸಿ ಏಕದಿನ ರ್ಯಾಂಕಿಂಗ್ನಲ್ಲಿ ತಮ್ಮ ಅಗ್ರಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ವಿರಾಟ್ ಕೊಹ್ಲಿ 887 ರೇಟಿಂಗ್ ಅಂಕ ಪಡೆದು ಅಗ್ರಸ್ಥಾನದಲ್ಲಿ ಮುಂದುವರಿದರೆ, ರೋಹಿತ್ 873 ಅಂಕಗಳಿಸಿಕೊಂಡಿದ್ದು, ಎರಡನೇ ಸ್ಥಾನ ಕಾಯ್ದುಕೊಂಡಿದ್ದಾರೆ. ರೋಹಿತ್ ಶರ್ಮಾ ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಮೂರು ಪಂದ್ಯಗಳಲ್ಲಿ ಒಂದು ತಲಾ ಒಂದು ಶತಕ ಹಾಗೂ ಅರ್ಧಶತಕ ಸಹಿತ 258 ರನ್ ಸಿಡಿಸಿ ಮಿಂಚಿದ್ದ ಅವರು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಇನ್ನು ಕೊಹ್ಲಿ ಕೂಡ ಕೊನೆಯ ಏಕದಿನ ಪಂದ್ಯದಲ್ಲಿ 85 ರನ್ ಸಿಡಿಸಿದ್ದರು. ಕೆ.ಎಲ್. ರಾಹುಲ್ ಮೂರು ಪಂದ್ಯಗಳಿಂದ 185 ರನ್ಗಳಿಸಿದ್ದರು. ಅವರು ಕೂಡ 17 ಸ್ಥಾನ ಏರಿಕೆ ಕಂಡಿದ್ದಾರೆ. ಇನ್ನು ಪಾಕಿಸ್ತಾನದ ಬಾಬರ್ ಅಜಂ 3, ಪಾಫ್ ಡು ಪ್ಲೆಸಿಸ್ 4 ರಾಸ್ ಟೇಲರ್ 5, ಕೇನ್ ವಿಲಿಯಮ್ಸನ್ 6, ಡೇವಿಡ್ ವಾರ್ನರ್ 7, ಜೋ ರೂಟ್ 8ನೇ ಸ್ಥಾನ ಪಡೆದಿದ್ದಾರೆ.
ಭಾರತ ವಿರುದ್ಧ 3 ಪಂದ್ಯಗಳಲ್ಲಿ 222 ರನ್ಗಳಿಸಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ವಿಂಡೀಸ್ ತಂಡದ ಶಾಯ್ ಹೋಪ್ 5 ಸ್ಥಾನ ಮೇಲೇರಿ 9ನೇ ಸ್ಥಾನ ಪಡೆದುಕೊಂಡಿದ್ದಾರೆ. ಶಿಮ್ರಾನ್ ಹೆಟ್ಮೈರ್ 7 ಸ್ಥಾನ ಮೇಲೇರಿ 19 ನೇ ಸ್ಥಾನ, ಪೂರಾನ್ 32 ಸ್ಥಾನ ಮೇಲೇರಿ 30ನೇ ಸ್ಥಾನ ಅಲಂಕರಿಸಿದ್ದಾರೆ.