ನವದೆಹಲಿ: ಮುಂದಿನ ಎರಡು ವರ್ಷಗಳಲ್ಲಿ ಎರಡು ಟಿ-20 ವಿಶ್ವಕಪ್‌ಗಳ ಆತಿಥ್ಯ ಕುರಿತು ಚರ್ಚಿಸಲು ಬಿಸಿಸಿಐ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯಸ್ಥರು ಇಂದು ಐಸಿಸಿ ಮೂಲಕ ಸಭೆ ನಡೆಸಲಿದ್ದಾರೆ.
2021 ಮತ್ತು 2022 ಆವೃತ್ತಿಗಳ ಆತಿಥ್ಯದ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜೈ ಶಾ ಅವರೊಂದಿಗೆ ಕ್ರಿಕೆಟ್ ಆಸ್ಟ್ರೆಲಿಯಾದ ಅರ್ಲ್ ಎಡ್ಡಿಂಗ್ಸ್ ಮತ್ತು ನಿಕ್ ಹಾಕ್ಲೆ ಒಮ್ಮತಕ್ಕೆ ಬರುವ ನಿರೀಕ್ಷೆಯಿದೆ.
"ಮುಂದಿನ ವರ್ಷದ ಆರಂಭದಲ್ಲಿ ನ್ಯೂಜಿಲ್ಯಾಂಡ್ನಲ್ಲಿ ನಡೆಯಲಿರುವ ಮಹಿಳಾ ಏಕದಿನ ವಿಶ್ವಕಪ್ ಸೇರಿದಂತೆ ಐಸಿಸಿ ಪಂದ್ಯಾವಳಿಗಳನ್ನು ನಿಗದಿಪಡಿಸುವುದು ಸಭೆಯ ಮುಖ್ಯ ಕಾರ್ಯಸೂಚಿಯಾಗಿದೆ. ಇದಲ್ಲದೇ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ" ಎಂದು ಐಸಿಸಿ ಮಂಡಳಿಯ ಸದಸ್ಯರೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಈ ವರ್ಷ ಅಕ್ಟೋಬರ್ 18 ರಿಂದ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಐಸಿಸಿ ಟಿ-20 ವಿಶ್ವಕಪ್ ಮುಂದೂಡಲ್ಪಟ್ಟಿತು. ಹೀಗಾಗಿ ಯುಎಇನಲ್ಲಿ ಸೆಪ್ಟೆಂಬರ್ 19 ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಸಲು ಬಿಸಿಸಿಐ ಸಿದ್ಧತೆ ನಡೆಸಿದೆ.
ಅಕ್ಟೋಬರ್ 2021 ರಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಟಿ -20 ವಿಶ್ವಕಪ್ ಆತಿಥ್ಯ ವಹಿಸಲು ಬಯಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಏಕೆಂದರೆ ಅದು ಈಗಾಗಲೇ ಸಿದ್ಧತೆಗಳನ್ನು ಪ್ರಾರಂಭಿಸಿದ್ದು, ಎರಡು ವರ್ಷಗಳ ಕಾಲ ಕಾಯಲು ಇಷ್ಟಪಡುವುದಿಲ್ಲ. ಆದರೆ ಬಿಸಿಸಿಐ ಸಹ 2021 ರಲ್ಲಿ ಪಂದ್ಯಾವಳಿಯನ್ನು ಆಯೋಜಿಸುವ ಹಕ್ಕನ್ನು ತ್ಯಜಿಸಲು ಬಯಸುವುದಿಲ್ಲ.
ಬಿಸಿಸಿಐ 2021 ರಲ್ಲಿ ಟಿ- 20 ವಿಶ್ವಕಪ್ ಆಯೋಜಿಸಲು ನಿರ್ಧರಿಸಿತ್ತು. ಈ ನಿರ್ಧಾರದಿಂದ ಹಿಂದೆ ಸರಿಯಲು ಬಿಸಿಸಿಐ ಇಷ್ಟಪಡುತ್ತಿಲ್ಲ. ಏಕೆಂದೆ, 2022 ರಲ್ಲಿ ಟಿ -20 ವಿಶ್ವಕಪ್ ಅನ್ನು ಆಯೋಜಿಸುವುದು. ನಂತರ ಕೇವಲ ಒಂದು ವರ್ಷದ ಅಂತರದಲ್ಲಿ ಏಕದಿನ ವಿಶ್ವಕಪ್ ಆಯೋಜಿಸುವುದು ಕಷ್ಟವಾಗುತ್ತದೆ ಎಂದು ಐಸಿಸಿ ಮಂಡಳಿಯ ಮತ್ತೊಬ್ಬ ಸದಸ್ಯ ಹೇಳಿದ್ದಾರೆ.
ಐಸಿಸಿ ವೆಬ್‌ಸೈಟ್, ಆಸ್ಟ್ರೇಲಿಯಾದಲ್ಲಿ ಟಿ-20 ವಿಶ್ವಕಪ್ ಪಂದ್ಯಗಳಿಗೆ ಟಿಕೆಟ್ ಕಾಯ್ದಿರಿಸಿದವರು ಮುಂದಿನ ಪ್ರಕಟಣೆಯವರೆಗೆ ಕಾಯಬೇಕು ಎಂದು ಹೇಳಿದೆ. ಕಾರಣ ಕ್ರಿಕೆಟ್ ಆಸ್ಟ್ರೇಲಿಯಾ ಮುಂದಿನ ವರ್ಷ ಇವೆಂಟ್ ಅನ್ನು ಆಯೋಜಿಸಲು ಬಯಸಿದೆ ಎಂದು ಹೇಳಿದೆ.