ನವದೆಹಲಿ : ಭಾರತದಲ್ಲೇ ಟಿ20 ವಿಶ್ವಕಪ್ ನಡೆಯಲಿದೆ. ಅದಕ್ಕಾಗಿ ಟೀಂ ಇಂಡಿಯಾ ಸೂಕ್ತ ಸ್ಪಿನ್ನರ್ಗಳ ಹುಡುಕಾಟದಲ್ಲಿ ನಾಯಕ ಕೊಹ್ಲಿ ಮತ್ತು ಕೋಚ್ ರವಿ ಶಾಸ್ತ್ರಿ ತಲ್ಲೀನರಾಗಿದ್ದಾರೆ. ಪ್ರಸ್ತುತ ಟೀಂ ಇಂಡಿಯಾದ ಮೊದಲ ಆಯ್ಕೆ ಯುಜ್ವೇಂದ್ರ ಚಹಾಲ್ ಮತ್ತು ಕುಲ್ದೀಪ್ ಯಾದವ್. ಆದರೆ, ಕಳೆದ ಕೆಲ ಪಂದ್ಯಗಳ ಪ್ರದರ್ಶನ ನೋಡಿದಾಗ, ಇವರಿಬ್ಬರೂ ದುಬಾರಿಯಾಗುತ್ತಿದ್ದಾರೆ.
ಹಾಗಾಗಿ, ಭಾರತ ಆಯ್ಕೆ ಸಮಿತಿ ಅನುಭವಿಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾರನ್ನು ಟಿ20 ವಿಶ್ವಕಪ್‌ಗೆ ಪ್ರಧಾನ ಸ್ಪಿನ್ನರ್ಗಳಾಗಿ ಆಯ್ಕೆ ಮಾಡಬೇಕೆಂದು ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಮಾಂಟಿ ಪನೇಸರ್ ಅಭಿಪ್ರಾಯ ಪಟ್ಟಿದ್ದಾರೆ.
ಕಳೆದ 10 ಟಿ20 ಪಂದ್ಯಗಳಿಂದ ಚಹಾಲ್ 9 ವಿಕೆಟ್ ಪಡೆದಿದ್ದಾರೆ. ಕುಲ್ದೀಪ್‌ಗೆ ಹೆಚ್ಚು ಅವಕಾಶ ದೊರೆತಿಲ್ಲ. 2018ರ ನಂತರ 9 ಟಿ20 ಪಂದ್ಯಗಳು ನಡೆದಿದ್ದರು ಕುಲ್ದೀಪ್ ಕೇವಲ 4 ಪಂದ್ಯಗಳಲ್ಲಿ ಕಾಣಿಸಿದ್ದಾರೆ. ಕೊನೆಯ ಬಾರಿ 2020ರಲ್ಲಿ ಶ್ರೀಲಂಕಾ ವಿರುದ್ಧ ಇಂದೋರ್ನಲ್ಲಿ ಆಡಿದ್ದ ಯಾದವ್ 38ರನ್ ನೀಡಿ 2 ವಿಕೆಟ್ ಪಡೆದಿದ್ದರು.
"ಅಕ್ಟೋಬರ್ಗೆ ಟಿ20 ವಿಶ್ವಕಪ್ ಬರುತ್ತಿದೆ. ವಿರಾಟ್ ಉತ್ತಮ ಸ್ಪಿನ್ನರ್ಗಳನ್ನು ಆಯ್ಕೆ ಮಾಡಲು ಬಯಸುತ್ತಾರೆ. ಅವರು ಯಾರು ಎನ್ನುವುದು ಇಲ್ಲಿ ಮುಖ್ಯ ವಿಚಾರವಲ್ಲ. ಅವರು ವೇಗಿಗಳನ್ನು ಆಲ್ರೌಂಡರ್ಸ್ ಮತ್ತು ಬ್ಯಾಟ್ಸ್ಮನ್ಗಳನ್ನು ಹೊಂದಿದ್ದಾರೆ.
ಆದರೆ, ಸ್ಪಿನ್ನರ್ಗಳ ಆಯ್ಕೆ ಅವರಿಗೆ ಚಿಂತೆಯಾಗಿದೆ. ನಾನೇದರೂ ವಿರಾಟ್ ಆಗಿದ್ದರೆ, ಈ ಸ್ಥಾನಕ್ಕೆ ಅಶ್ವಿನ್-ಜಡೇಜಾರನ್ನು ಕುಲ್ದೀಪ್ ಮತ್ತು ಯಾದವ್ ಜಾಗಕ್ಕೆ ಆಯ್ಕೆ ಮಾಡಲು ಯಾವುದೇ ಆಲೋಚನೆ ಮಾಡುತ್ತಿರಲಿಲ್ಲ. ಅಶ್ವಿನ್-ಜಡೇಜಾ ಅವರ ಅನುಭವ ಮತ್ತು ಸಾಮರ್ಥ್ಯವೇ ಆಯ್ಕೆಗೆ ಕಾರಣ, ಅವರಿಬ್ಬರನ್ನು ಏಕೆ ಚಹಾಲ್ ಮತ್ತು ಕುಲ್ದೀಪ್ ಜಾಗಕ್ಕೇ ಆಯ್ಕೆ ಮಾಡಬಾರದು? " ಎಂದು ಪನೇಸರ್ ಪ್ರಶ್ನಿಸಿದ್ದಾರೆ.
ವಿಶ್ವಕಪ್ ಬರುತ್ತಿದೆ. ಅಶ್ವಿನ್ ಬಹು ದೊಡ್ಡ ಪಾತ್ರವಹಿಸಲಿದ್ದಾರೆ. ಅವರು ಅದ್ಭುತವಾದ ಜ್ಞಾನ ಮತ್ತು ಅನುಭವ ಹೊಂದಿದ್ದಾರೆ. ಅಶ್ವಿನ್ ಮತ್ತು ಜಡೇಜಾರನ್ನು ವಿಶ್ವಕಪ್‌ಗೆ ಪರಿಗಣಿಸಿ ಎಂದು ನಾನು ಕೊಹ್ಲಿಗೆ ಸಲಹೆ ನೀಡುತ್ತೇನೆ ಎಂದು ಮಾಂಟಿ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ:ಧೋನಿ ವಿಕೆಟ್ ಪಡೆಯಬೇಕು ಎಂಬ ನನ್ನ ಕನಸು ನನಸಾಗಿದೆ: ಆವೇಶ್ ಖಾನ್