ಮುಂಬೈ: ಭಾರತ ಕ್ರಿಕೆಟ್ ತಂಡವನ್ನು ಬಲಿಷ್ಠ ತಂಡವನ್ನಾಗಿ ಮಾರ್ಪಡಿಸಿದ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿ ಅಕ್ಟೋಬರ್ 23 ಕ್ಕೆ ಅಧಿಕಾರ ಸ್ವೀಕರಿಸಲಿದ್ದಾರೆ.
ಬಿಸಿಸಿಐ ಅಧ್ಯಕ್ಷನಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾದನಂತರ ತವರಿಗೆ ಮರಳಿರುವ ದಾದಾಗೆ ಅದ್ದೂರಿ ಸ್ವಾಗತ ಕೋರಲಾಗಿದೆ. ಈ ಸಂದರ್ಭದಲ್ಲಿ ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಧೋನಿ ಭವಿಷ್ಯದ ಬಗ್ಗೆ ಅಕ್ಟೋಬರ್ 24 ರಂದು ಆಯ್ಕೆಸಮಿತಿಯ ಜೊತೆ ಮಾತನಾಡಲಿದ್ದೇನೆ ಎಂದು ತಿಳಿಸಿದ್ದಾರೆ.
2019 ಏಕದಿನ ವಿಶ್ವಕಪ್ ಸೆಮಿಫೈನಲ್ ನಂತರ ಬ್ಲೂ ಜರ್ಸಿಯಿಂದ ದೂರವಿರುವ ಧೋನಿ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಹಾಗೂ ಮುಂಬರುವ ಬಾಂಗ್ಲಾದೇಶದ ವಿರುದ್ಧದ ಸರಣಿಯಿಂದಲೂ ಹೊರಗುಳಿದಿದ್ದಾರೆ. ಈ ಮಧ್ಯೆ ಭಾರತಕ್ಕೆ 2 ವಿಶ್ವಕಪ್ ಗೆಲ್ಲಿಸಿಕೊಟ್ಟ ಧೋನಿಯ ನಿವೃತ್ತಿಯ ವಿಚಾರ ಭಾರಿ ಸದ್ದು ಮಾಡಿತ್ತು.
ಇದೇ ವಿಚಾರವಾಗಿ ಮಾತನಾಡಿರುವ ಸೌರವ್ ಗಂಗೂಲಿ, ಅಕ್ಟೋಬರ್ 24 ರಂದು ಆಯ್ಕೆ ಸಮಿತಿಯನ್ನು ಭೇಟಿ ಮಾಡಿ ಧೋನಿ ವಿಚಾರದಲ್ಲಿ ಅವರ ನಿಲುವೇನು ಎಂದು ತಿಳಿದುಕೊಳ್ಳುತ್ತೇನೆ. ನಂತರ ನನ್ನ ಅನಿಸಿಕೆಯನ್ನು ಅವರಿಗೆ ಹೇಳುತ್ತೇನೆ. ನಂತರ ಸದ್ಯದಲ್ಲೆ ಧೋನಿಗೆ ಕರೆಮಾಡಿ ಅವರಿಗೇನು ಬೇಕು ಎಂಬುವುದರ ಬಗ್ಗೆಯೂ ತಿಳಿದುಕೊಳ್ಳುತ್ತೇನೆ ಎಂದು ದಾದಾ ತಿಳಿಸಿದ್ದಾರೆ.
ಇದರ ಜೊತೆಗೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಅಕ್ಟೋಬರ್ 24 ರಂದು ಭೇಟಿಯಾಗಲು ಗಂಗೂಲಿ ಬಯಸಿದ್ದಾರೆ.