ಆ್ಯಂಟಿಗುವಾ:ವೆಸ್ಟ್ ಇಂಡೀಸ್ ವಿರುದ್ಧ ಅರ್ಧಶತಕ ಸಿಡಿಸಿದ ಆಲ್ರೌಂಡರ್ ರವೀಂದ್ರ ಜಡೇಜಾ ಭಾರತ ತಂಡ ಅಲ್ಪ ಮೊತ್ತಕ್ಕೆ ಕುಸಿಯದಂತೆ ತಡೆದು ತಮ್ಮ ಆಯ್ಕೆ ಸಮರ್ಥಿಸಿಕೊಂಡಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಪಂದ್ಯಕ್ಕೆ ಅಶ್ವಿನ್ ಬದಲು ಜಡೇಜಾರನ್ನು ಆಯ್ಕೆ ಮಾಡಲಾಗಿತ್ತು. ವೆಸ್ಟ್ ವಿಂಡೀಸ್ ವಿರುದ್ಧ ತವರು ಮತ್ತು ವಿದೇಶದಲ್ಲಿ ಅಶ್ವಿನ್ ಅದ್ಭುತ ಪ್ರದರ್ಶನ ತೋರಿದ ದಾಖಲೆ ಹೊಂದಿದ್ದಾರೆ. ಹೀಗಾಗಿ ಅಶ್ವಿನ್ರನ್ನು ತಂಡದಿಂದ ಕೈಬಿಟ್ಟಿದ್ದಕ್ಕೆ ಸುನಿಲ್ ಗವಾಸ್ಕರ್, ಸೌರವ್ ಗಂಗೂಲಿ, ವಿರಾಟ್ ಕೊಹ್ಲಿ ಹಾಗೂ ರವಿಶಾಸ್ತ್ರಿ ವಿರುದ್ಧ ಹರಿಯಾಯ್ದಿದ್ದರು.
ಆದರೆ, ಜಡೇಜಾ ತಂಡ 186ಕ್ಕೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ವೇಳೆ ಬಾಲಂಗೋಚಿಗಳೊಂದಿಗೆ ಸೇರಿ ತಂಡದ ಮೊತ್ತವನ್ನು 297ಕ್ಕೇರಿಸಿ ತಮ್ಮ ಆಯ್ಕೆ ಸಮರ್ಥಿಸಿ ಕೊಹ್ಲಿ ಹೆಸರನ್ನು ಉಳಿಸಿದ್ದಾರೆ. ಜಡ್ಡು ಈ ವೇಳೆ 112 ಎಸೆತಗಳಲ್ಲಿ 6 ಬೌಂಡರಿ ಒಂದು ಸಿಕ್ಸರ್ ಸಹಿತ 58 ರನ್ಗಳಿಸಿ ತಂಡಕ್ಕೆ ಅಮೂಲ್ಯ ಕೊಡುಗೆ ನೀಡಿದ್ದರು.
ಅರ್ಧಶತಕ ಸಿಡಿಸಿ ಔಟಾದ ನಂತರ ಮಾತನಾಡಿರುವ ಜಡೇಜಾ, ರಿಷಭ್ ಪಂತ್ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದರಿಂದ ಇತರೆ ಬ್ಯಾಟ್ಸ್ಮನ್ಗಳ ಜೊತೆ ಸೇರಿ ಇನ್ನಿಂಗ್ಸ್ ಕಟ್ಟುವ ಜವಾಬ್ದಾರಿ ನನ್ನ ಹೇಗಲಿಗೇರಿತ್ತು. ಅದನ್ನು ನಾನು ತಕ್ಕ ಮಟ್ಟಿಗೆ ನಿರ್ವಹಿಸಿ, ಕೊಹ್ಲಿ ನನ್ನ ಮೇಲಿಟ್ಟಿದ್ದ ನಂಬಿಕೆಯನ್ನು ಉಳಿಸಿಕೊಂಡಿದ್ದೇನೆ. ಯಾವುದೇ ಒಬ್ಬ ಆಟಗಾರ ನಾಯಕನ ನಂಬಿಕೆಯನ್ನು ಉಳಿಸುವ ಕೆಲಸ ಮಾಡಬೇಕಾದದ್ದು ಆತನ ಕರ್ತವ್ಯವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಜಡೇಜಾ ಅರ್ಧಶತಕದ ನೆರವಿನಿಂದ ಭಾರತ ತಂಡ 297 ರನ್ಗಳಿಸಿತ್ತು. ಈ ಮೊತ್ತ ಹಿಂಬಾಲಿಸಿರುವ ವಿಂಡೀಸ್ 189 ರನ್ಗಳಿಗೆ 8 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿದೆ. ಇಶಾಂತ್ ಶರ್ಮಾ 5 ವಿಕೆಟ್ ಪಡೆದರೆ, ಬುಮ್ರಾ, ಜಡೇಜಾ ಹಾಗೂ ಶಮಿ ತಲಾ ಒಂದು ವಿಕೆಟ್ ಪಡೆದಿದ್ದಾರೆ.