ನವದೆಹಲಿ: ನನಗೆ ಸದಾ ಕಾಮೆಂಟರಿ ಮಾಡುವಷ್ಟು ತಾಳ್ಮೆಯಿಲ್ಲ, ಆದ್ರೆ, ಐಸಿಸಿ ಇವೆಂಟ್ಗಳಲ್ಲಿ ಕಾಮೆಂಟರಿ ಮಾಡಲು ಪ್ರಯತ್ನಿಸುವೆ ಎಂದು ಭಾರತ ತಂಡದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ತಿಳಿಸಿದ್ದಾರೆ.
ಭಾರತ ತಂಡದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಜೊತೆ ಇನ್ಸ್ಟಾಗ್ರಾಂ ಲೈವ್ ಸೆಸನ್ನಲ್ಲಿ ಮಾತನಾಡುವ ವೇಳೆ ಕಾಮೆಂಟೇಟರ್ ಆಗುವ ಬಗ್ಗೆ ಯುವಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ನನಗೆ ಸಾರ್ವಕಾಲಿಕ ಕಾಮೆಂಟರಿ ಮಾಡುವಷ್ಟು ತಾಳ್ಮೆಯಿಲ್ಲ. ಆದರೆ, ಐಸಿಸಿ ಇವೆಂಟ್ಗಳಲ್ಲಿ ಕಾಮೆಂಟರಿಗೆ ಕೈಜೋಡಿಸುವೆ ಎಂದು ಯುವಿ ಹೇಳಿಕೊಂಡಿದ್ದಾರೆ.
ಒತ್ತಡವನ್ನು ಎದುರಿಸುವುದನ್ನು ಮೈದಾನದಲ್ಲಿ ಆಡಿದ ಆಟಗಾರರಿಗೆ ಮಾತ್ರ ಗೊತ್ತಿರುತ್ತದೆ. ಹೀಗಾಗಿ ನಾನು ಆಟಗಾರರನ್ನು ಟೀಕಿಸಲು ಇಷ್ಟವಿಲ್ಲದ ಕಾರಣ ಕಾಮೆಂಟರಿ ಮಾಡುವುದನ್ನು ಬಯಸುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.
ಇನ್ನು ಕೋಚ್ ಹುದ್ದೆ ಕಡೆಗೆ ಹೆಚ್ಚಿನ ಆಸಕ್ತಿ ಇರುವುದಾಗಿ ತಿಳಿಸಿದ್ದಾರೆ. ಇದರಿಂದ ಹೆಚ್ಚಿನ ಜನರ ಜೊತೆ ಬೆರೆಯಬಹುದು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.