ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್ ಮ್ಯಾಚ್ ಫಿಕ್ಸಿಂಗ್ನಲ್ಲಿ ಭಾಗಿಯಾಗಿದ್ದ ಬ್ಯಾಟ್ಸ್ಮನ್ ಹಾಗೂ ಕೋಚ್ ಅವರನ್ನು ಈಗಾಗಲೆ ಬಂಧಿಸಲಾಗಿದ್ದು, ಅವರು ಅನುಸರಿಸುತ್ತಿದ್ದ ಕೆಲವು ಸಿಗ್ನಲ್ಗಳನ್ನು ಬೆಂಗಳೂರು ಪೊಲೀಸರು ಬಹಿರಂಗಗೊಳಿಸಿದ್ದಾರೆ.
ಕಳೆದ ವಾರ ಮ್ಯಾಚ್ ಫೀಕ್ಸಿಂಗ್ನಲ್ಲಿ ಪಾಳ್ಗೊಂಡಿದ್ದ ಬೆಂಗಳೂರು ಬ್ಲಾಸ್ಟರ್ನ ಬ್ಯಾಟ್ಸ್ಮನ್ ಎಂ ವಿಶ್ವನಾಥನ್ ಹಾಗೂ ಕೋಚ್ ವೀನೂ ಪ್ರಸಾದ್ ಅವರನ್ನು ಬಂಧಿಸಲಾಗಿತ್ತು. ಬಂಧಿತರು ಫಿಕ್ಸಿಂಗ್ ವೇಳೆ ಬುಕ್ಕಿಗಳಿಗೆ ನೀಡುತ್ತಿದ್ದ ಸಿಗ್ನಲ್ಗಳ ಬಗ್ಗೆ ಪೊಲೀಸರ ತನಿಖೆಯಿಂದ ಬಹಿರಂಗಗೊಂಡಿದೆ.
2018ರಲ್ಲಿ ಬೆಂಗಳೂರು ಬ್ಲಾಸ್ಟರ್ ಹಾಗೂ ಬೆಳಗಾವಿ ಪ್ಯಾಂಥರ್ಸ್ ನಡುವಿನ ಪಂದ್ಯದ ವೇಳೆ ಬುಕ್ಕಿಗಳಿಗೆ ಬ್ಯಾಟ್ ಚೇಂಜ್ ಮಾಡುವುದು ಹಾಗೂ ಜರ್ಸಿ ತೋಳನ್ನು ಎತ್ತುವುದರ ಮೂಲಕ ಸಿಗ್ನಲ್ ಕೊಡುತ್ತಿದ್ದರು ಎಂದು ತಿಳಿದು ಬಂದಿದೆ. 118 ರನ್ಗಳ ಟಾರ್ಗೆಟ್ ಪಡೆದಿದ್ದ ಬ್ಲಾಸ್ಟರ್ ತಂಡಕ್ಕೆ ಆರಂಭಿಕನಾಗಿ ಕಣಕ್ಕಿಳಿದಿದ್ದ ವಿಶ್ವನಾಥನ್ ನಿಧಾನಗತಿ ಬ್ಯಾಟಿಂಗ್ ನಡೆಸಿ ಔಟಾಗುವುದಕ್ಕೆ 5 ಲಕ್ಷ ರೂಪಾಯಿ ಹಣ ಪಡೆದಿರುವುದು ಸಾಬೀತಾಗಿದೆ.
ಈ ಪಂದ್ಯದಲ್ಲಿ 20 ಎಸೆತಗಳನ್ನು ಎದುರಿಸಿ ವಿಶ್ವನಾಥನ್ ಕೇವಲ 10 ರನ್ಗಳಿಸಿ ಔಟಾಗಿದ್ದರು. ಈ ಪಂದ್ಯದಲ್ಲಿ ಬುಕ್ಕಿಗಳು 17 ಎಸೆತಗಳಲ್ಲಿ 9 ರನ್ಗಳಿಸುವಂತೆ ಬೇಡಿಕೆಯಿಟ್ಟಿದ್ದರು ಎಂದು ತನಿಖೆಯಿಂದ ದೃಡಪಟ್ಟಿದೆ. ಆ ಪಂದ್ಯದಲ್ಲಿ ವಿಶ್ವನಾಥನ್ ಇದ್ದ ತಂಡ 6 ವಿಕೆಟ್ಗಳ ಜಯ ಸಾಧಿಸಿತ್ತು.