ಕ್ರೈಸ್ಟ್ಚರ್ಚ್: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 2019ರ ವಿಶ್ವಕಪ್ ಸೆಮಿಫೈನಲ್ ಸೋಲಿನ ನಂತರ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ನಲ್ಲಿ ಪಾಲ್ಗೊಂಡಿಲ್ಲ.
ಕಳೆದ ಏಳೆಂಟು ತಿಂಗಳಿಂದ ಎಂ ಎಸ್ ಧೋನಿ ಕ್ರಿಕೆಟ್ನಿಂದ ದೂರ ಉಳಿದಿದ್ದಾರೆ. ಇದಕ್ಕೆ ನ್ಯೂಜಿಲ್ಯಾಂಡ್ನ ಮಾಜಿ ಆಟಗಾರ ಹಾಗೂ ಕ್ರಿಕೆಟ್ ಕಾಮೆಂಟೇಟರ್ ಇಯಾನ್ ಸ್ಮಿತ್ ಧೋನಿಯನ್ನು ನೆನಪಿಸಿಕೊಂಡಿದ್ದು," ಧೋನಿ ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ, ಅವರನ್ನು ನಿಜಕ್ಕೂ ಧೋನಿ ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಿಲ್ಲ ಎಂದು ಹೇಳಲಾಗದು" ಎಂದು ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
" ಧೋನಿ ಓರ್ವ ಅತ್ಯುತ್ತಮ ನಾಯಕ, ಗ್ರೇಟ್ ಫಿನಿಶರ್. ಅವರು 2019ರ ವಿಶ್ವಕಪ್ಅನ್ನು ಭಾರತಕ್ಕೆ ಬಹುತೇಕ ತಂದುಕೊಡುವವರಿದ್ದರು. ನಾನು ಅವರ ಆಟ ಹಾಗೂ ನಾಯಕತ್ವ ಗುಣವನ್ನು ಮೆಚ್ಚಿಕೊಂಡಿದ್ದೇನೆ ಹಾಗೂ ಅವರ ಬಗ್ಗೆ ಮಾತನಾಡುವುದಕ್ಕೆ ಇಷ್ಟಪಡುತ್ತೇನೆ. ಹಾಗೆಯೇ ಸಮಯ ಕಳೆಯುತ್ತಿರುವುದರಿಂದ ಅನಿವಾರ್ಯವಾಗಿ ಹೊಸ ಪೀಳಿಗೆಯವರಿಗೆ ಅವಕಾಶ ಮಾಡಿಕೊಡಲಾಗುತ್ತಿರುವುದನ್ನು ಒಪ್ಪಿಕೊಳ್ಳಬೇಕಾಗಿದೆ" ಎಂದಿದ್ದಾರೆ.
ಧೋನಿ ಕ್ರಿಕೆಟ್ನಿಂದ ದೂರ ಉಳಿದು ತಿಂಗಳುಗಳೇ ಉರುಳಿವೆ. ಇದೀಗ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕು ಮುಗಿಯಿತು ಎಂಬ ಚರ್ಚೆ ನಡೆಯುತ್ತಲೇ ಇದೆ. ಆದರೆ ಭಾರತದ ಮಾಜಿ ಕ್ರಿಕೆಟಿಗರಾದ ಕಪಿಲ್ ದೇವ್, ರವಿ ಶಾಸ್ತ್ರಿ ಹಾಗೂ ಸೌರವ್ ಗಂಗೂಲಿ ಅಂತಹವರು ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನ ದಿಢೀರ್ ಮುಕ್ತಾಯವಾಗುವುದನ್ನು ಪ್ರಶ್ನಿಸಿದ್ದಾರೆ. ಅಲ್ಲದೆ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಖಂಡಿತ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೇ ಮಾರ್ಚ್ 29 ರಿಂದ 2020ರ ಐಪಿಎಲ್ ಆವೃತ್ತಿ ಆರಂಭವಾಗಲಿದೆ. ಧೋನಿ ಇದಕ್ಕೆ ಬುಧವಾರದಿಂದ ಆರಂಭವಾಗಲಿರುವ ಸಿಎಸ್ಕೆ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಬಾರಿಯ ಐಪಿಎಲ್ ಧೋನಿ ಕ್ರಿಕೆಟ್ ಬದುಕನ್ನು ನಿರ್ಧರಿಸಿಲಿದ್ದು, ಈ ಸವಾಲನ್ನು ಅವರು ಹೇಗೆ ಸ್ವೀಕರಿಸಲಿದ್ದಾರೆ ಎಂಬುದನ್ನು ಕೋಟ್ಯಂತರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.