ಮುಂಬೈ: ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಕಾರಣ, ಮುಂಬರುವ ಬಾಂಗ್ಲಾ ವಿರುದ್ಧದ ಟಿ20 ಸರಣಿಯಿಂದಲೂ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ.
ಬೆನ್ನು ನೋವಿನ ಸಮಸ್ಯೆಯಿಂದಲೇ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಪಾಂಡ್ಯ ಹೊರಗುಳಿದಿದ್ದು, ಚಿಕಿತ್ಸೆಗಾಗಿ ಯುನೈಟೆಡ್ ಕಿಂಗ್ಡಮ್ಗೆ ಪ್ರಯಾಣಿಸಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ನಡೆದಿದ್ದ ಏಷ್ಯಾ ಕಪ್ ಸರಣಿ ವೇಳೆಯೂ ಪಾಂಡ್ಯ ಚಿಕಿತ್ಸೆಗೊಳಗಾಗಿದ್ದರು.
2020ರ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳುವುದಕ್ಕೂ ಮುನ್ನ ಹಾರ್ದಿಕ್ ಯಾವುದೇ ಪಂದ್ಯಗಳಲ್ಲಿ ಭಾಗಿಯಾಗದೇ ವಿಶ್ರಾಂತಿ ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಜತೆಗೆ ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ನಲ್ಲಿ ತಂಡಕ್ಕೆ ಇವರ ಅವಶ್ಯಕತೆಯಿರುವ ಕಾರಣ ಬಿಸಿಸಿಐ ಸಹ ವೈಟ್ ಬಾಲ್ ಫಾರ್ಮೆಟ್ನ ಕ್ರಿಕೆಟ್ನಲ್ಲಿ ಮಾತ್ರ ಅವರನ್ನು ಬಳಕೆ ಮಾಡಿಕೊಳ್ಳಲು ನಿರ್ಧರಿಸಿದೆ.
25 ವರ್ಷದ ಪಾಂಡ್ಯ 11 ಟೆಸ್ಟ್ ಪಂದ್ಯಗಳಿಂದ 11ವಿಕೆಟ್, 532 ರನ್, 54 ಏಕದಿನ ಪಂದ್ಯಗಳಿಂದ 937 ರನ್, 54 ವಿಕೆಟ್ ಹಾಗೂ 40 ಟಿ20 ಪಂದ್ಯಗಳಿಂದ 310 ರನ್ ಹಾಗೂ 38 ವಿಕೆಟ್ ಪಡೆದುಕೊಂಡಿದ್ದಾರೆ.