ಅಡಿಲೇಡ್: ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್, ಟೆಸ್ಟ್ ಕ್ರಿಕೆಟ್‌ಗಾಗಿ ತಯಾರಾಗಿದ್ದು, ಭಾರತ ವಿರುದ್ಧದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆ ಮಾಡಲಿದ್ದಾರೆ ಎಂದು ಆಸ್ಟ್ರೇಲಿಯಾ ನಾಯಕ ಟಿಮ್ ಪೈನ್ ಹೇಳಿದ್ದಾರೆ.
ಕ್ಯಾಮರೂನ್ ಗ್ರೀನ್ ಭಾರತ ಎ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿದ್ದರು. ಅದರೆ ಎರಡನೇ ಅಬ್ಯಾಸ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಬಾರಿಸಿದ ಚೆಂಡು ಅವರ ತಲೆಗೆ ಬಡಿದು ಗಾಯಗೊಂಡಿದ್ದರು.
"ಗ್ರೀನ್ ಉತ್ತಮವಾಗಿ ತರಬೇತಿ ಪಡೆದಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆದರೆ, ನಾಳೆ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯ ಆಡಲಿದ್ದಾರೆ. ಇದು ಅವರಿಗೆ, ನಮಗೆ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಅಭಿಮಾನಿಗಳಿಗೆ ಉತ್ತಮ ಸುದ್ದಿಯಾಗಿದೆ" ಎಂದು ಪೈನ್ ಹೇಳಿದ್ದಾರೆ.
ಅಭ್ಯಾಸ ಪಂದ್ಯದಲ್ಲಿ ಗ್ರೀನ್ ಜೊತೆಯಲ್ಲಿ ಬ್ಯಾಟಿಂಗ್ ಮಾಡಿದ್ಧ ಪೈನ್, ಸಾಕಷ್ಟು ರನ್ ಗಳಿಸುವುದನ್ನು ನೋಡಿದ್ದಾರೆ, ಅವರಿಗೆ ಮುಂದೆ ಉಜ್ವಲ ಭವಿಷ್ಯವಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಓದಿ: ಭಾರತ ಉತ್ತಮ ಬೌಲಿಂಗ್ ದಾಳಿ ಹೊಂದಿದೆ.. ಆದರೂ ಎಚ್ಚರಿಕೆಯಿಂದ ಆಡಬೇಕು: ಕಪಿಲ್ ದೇವ್
"ಆತ ಆಟವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾನೆ. ಒತ್ತಡದ ಸಮಯದಲ್ಲಿ ಶಾಂತವಾಗಿರುತ್ತಾನೆ. ಟೆಸ್ಟ್ ಕ್ರಿಕೆಟ್‌ಗಾಗಿ ಆತನನ್ನು ತಯಾರು ಮಾಡಲಾಗುತ್ತದೆ" ಎಂದು ಪೈನ್ ಹೇಳಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಹು ನಿರೀಕ್ಷಿತ 4 ಪಂದ್ಯಗಳ ಟೆಸ್ಟ್ ಸರಣಿ ನಾಳೆ ಅಡಿಲೇಡ್ನಲ್ಲಿ ನಡೆಯುವ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಮೂಲಕ ಆರಂಭವಾಗಲಿದೆ.