ನವದೆಹಲಿ : ರಣಜಿ ಕ್ರಿಕೆಟ್ನಲ್ಲಿ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಡಕ್‌ಔಟ್ ಮಾಡಿದ್ದ ಕ್ಷಣವನ್ನು ನೆನೆದರೆ ನನಗೆ ಈಗಲು ರೋಮಾಂಚನವಾಗುತ್ತದೆ ಎಂದು ಭಾರತ ಸ್ವಿಂಗ್ ಸ್ಪೆಷಲಿಸ್ಟ್ ಭುವನೇಶ್ವರ್ ಕುಮಾರ್ ಹೇಳಿಕೊಂಡಿದ್ದಾರೆ.
2009ರ ರಣಜಿ ಋತುವಿನಲ್ಲಿ ಮುಂಬೈ ಮತ್ತು ಉತ್ತರಪ್ರದೇಶಗಳ ನಡುವಿನ ಪಂದ್ಯದಲ್ಲಿ 19 ವರ್ಷದ ಭುವನೇಶ್ವರ್ ಕುಮಾರ್ ಸಚಿನ್ ತೆಂಡೂಲ್ಕರ್ ಅವರನ್ನು ಡಕ್‌ಔಟ್ ಮಾಡಿದ್ದರು. ಇದು ರಣಿಜಿ ಇತಿಹಾಸದಲ್ಲೇ ಸಚಿನ್ರ ಮೊದಲ ಡಕ್‌ಔಟ್ ಪ್ರದರ್ಶನವಾಗಿತ್ತು. ಯುವ ಬೌಲರ್ ತಮ್ಮ ಸ್ಪೆಲ್‌ನ 14ನೇ ಎಸೆತದಲ್ಲಿ ಸಚಿನ್ರನ್ನು ಔಟ್ ಮಾಡುವಲ್ಲಿ ಯಶಸ್ವಿಯಾಗಿದ್ದರು.
ರಣಜಿ ಕ್ರಿಕೆಟ್ ಇತಿಹಾಸದಲ್ಲಿ ಸಚಿನ್ ತೆಂಡೂಲ್ಕರ್ ಅವರಂತಹ ಬ್ಯಾಟ್ಸ್ಮನ್ರನ್ನು ಡಕ್‌ಔಟ್ ಮಾಡಿದ್ದು ನನ್ನ ಪಾಲಿಗೆ ವಿಶೇಷ ಕ್ಷಣವಾಗಿತ್ತು. ಆ ಕ್ಷಣವನ್ನು ನೆನೆದರೆ ಈಗಲೂ ನನಗೆ ರೋಮಾಂಚನವಾಗುತ್ತಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
"ಸಚಿನ್ ವಿಕೆಟ್ ಪಡೆಯುವ ಅವಕಾಶ ನನಗೆ ಸಿಕ್ಕಿದ್ದು ನನ್ನ ಅದೃಷ್ಟ. ಆ ವಿಶೇಷ ಕ್ಷಣವನ್ನು ನಾನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಅಂತಹ ಸಂದರ್ಭಗಳನ್ನು ನಾವು ಅನುಭವಿಸಲು ಮಾತ್ರ ಸಾಧ್ಯ ಹೊರತು, ವಿವರಿಸುವುದು ಸಾಧ್ಯವಿಲ್ಲ" ಎಂದು ಭುವಿ ಹೇಳಿದ್ದಾರೆ.
ಈ ಸಾಧನೆಯ ಶ್ರೇಯ ಅಂದಿನ ಉತ್ತರಪ್ರದೇಶ ತಂಡದ ನಾಯಕರಾಗಿದ್ದ ಮೊಹಮ್ಮದ್ ಕೈಫ್ಗೆ ಸಲ್ಲಬೇಕು. ಅವರು ಫೀಲ್ಡ್ ಸೆಟ್ ಮಾಡಿದ್ದರಿಂದ ಸಚಿನ್ ಕ್ಯಾಚ್ ಪಡೆಯಲು ಸಾಧ್ಯವಾಯಿತು ಎಂದು ಏಕದಿನ ಕ್ರಿಕೆಟ್ನಲ್ಲಿ 132 ವಿಕೆಟ್, ಟೆಸ್ಟ್ನಲ್ಲಿ 63 ವಿಕೆಟ್ ಪಡೆದಿರುವ ಭುವನೇಶ್ವರ್ ಕುಮಾರ್ ತಿಳಿಸಿದ್ದಾರೆ.