ಮುಂಬೈ: ಕೊರೊನಾ ಸಂಕ್ರಾಮಿಕ ರೋಗ ವಿಶದೆಲ್ಲೆಡೆ ತಾಂಡವವಾಡುತ್ತಿದೆ. ಇದರಿಂದ ಒಲಿಂಪಿಕ್ಸ್, ಐಪಿಎಲ್, ಫುಟ್ಬಾಲ್ ಸೇರಿದಂತೆ ಹಲವು ಕ್ರೀಡೆಗಳ ಟೂರ್ನಿಗಳು ಮುಂದೂಡಲ್ಪಟ್ಟಿವೆ.
ಇನ್ನು ಅಕ್ಟೋಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ಐಸಿಸಿ ವಿಶ್ವಕಪ್ ಟೂರ್ನಿ ಆಯೋಜನೆಯಾಗಿತ್ತು. ಆದರೆ ಕೊರೊನಾ ಭೀತಿಯಿಂದ ನಲುಗಿರುವ ಆಸ್ಟ್ರೇಲಿಯಾ ಸರ್ಕಾರ 6 ತಿಂಗಳವರೆಗೆ ವಿದೇಶಿ ವಿಮಾನಗಳನ್ನು ನಿಷೇಧಿಸುವ ಮೂಲಕ ವಿದೇಶಿಯರನ್ನು ತಡೆ ಹಿಡಿದಿದೆ. ಇದರಿಂದ ಟಿ-20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯುವುದು ಅನುಮಾನ ಎನ್ನಲಾಗುತ್ತಿದೆ.
ನಮಗೆಲ್ಲಾ ಗೊತ್ತಿರುವಂತೆ ಆಸ್ಟ್ರೇಲಿಯಾ ಸೆಪ್ಟೆಂಬರ್ವರೆಗೆ ವಿದೇಶಿಗರಿಗೆ ನಿಷೇಧ ಹೇರಿದೆ. ಟೂರ್ನಮೆಂಟ್ ಆಕ್ಟೋಬರ್ ಮಧ್ಯದಲ್ಲಿ ನಡೆಯಬೇಕಿದೆ. ಹೀಗಾಗಿ ಈ ಸಂದರ್ಭದಲ್ಲಿ ಟೂರ್ನಿ ನಡೆಯುವುದು ಕಷ್ಟವಾಗಿದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಮುಂದಿನ ಟಿ-20 ವಿಶ್ವಕಪ್ ಟೂರ್ನಿ ಭಾರತದಲ್ಲಿ ಆಯೋಜನೆಯಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ಒಂದು ಒಪ್ಪಂದ ಮಾಡಿಕೊಂಡು ವಿಶ್ವಕಪ್ ಟೂರ್ನಿಗಳನ್ನೇ ವಿನಿಮಯ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.
ಅಕ್ಟೋಬರ್ ಹೊತ್ತಿಗೆ ಭಾರತದಲ್ಲಿ ಕೊರೊನಾ ಪ್ರಭಾವ ಸಂಪೂರ್ಣ ಕಮ್ಮಿಯಾಗುವ ನಿರೀಕ್ಷೆ ಇದೆ. ಈಗ ಆಸ್ಟ್ರೇಲಿಯಾ ಒಪ್ಪಿದರೆ ಈ ವರ್ಷ ಇಲ್ಲಿಯೇ ನವೆಂಬರ್‌ನಲ್ಲಿ ವಿಶ್ವಕಪ್ ಆಯೋಜಿಸಲಿ ಎಂದಿದ್ದಾರೆ.
'ಭಾರತದಲ್ಲಿ ವಿಶ್ವಕಪ್ ಟೂರ್ನಿ ನಡೆಯುವಂತಾದರೆ ಅದಕ್ಕೂ ಮುನ್ನ ಐಪಿಎಲ್ ನಡೆಸಬಹುದು. ಇದರಿಂದ ಆಟಗಾರರಿಗೂ ಒಂದಿಷ್ಟು ಅಭ್ಯಾಸ ಮಾಡಿದಂತಾಗುತ್ತದೆ. ಸೆಪ್ಟೆಂಬರ್‌ನಲ್ಲಿ ಯುಎಇಯಲ್ಲಿ ಏಷ್ಯಾ ಕಪ್ ಟೂರ್ನಿ ಆಯೋಜಿಸಲಾಗಿದೆ. ಅದನ್ನು ಡಿಸೆಂಬರ್‌ಗೆ ಮುಂದೂಡಿ ಯುಎಇಯಲ್ಲಿಯೇ ನಡೆಸಲಿ. ಅದು ಸೂಕ್ತ ಸಮಯವೂ ಹೌದು' ಎಂದು ಗಾವಸ್ಕರ್ ಸಲಹೆ ನೀಡಿದ್ದಾರೆ.