ಹೈದರಾಬಾದ್: ಮಹಾಮಾರಿ ಕೊರೊನಾ ವೈರಸ್ ಕಾರಣ 13ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ದುಬೈನಲ್ಲಿ ನಡೆಸಲಾಯಿತು. ನಿನ್ನೆ ಡೆಲ್ಲಿ - ಮುಂಬೈ ನಡುವೆ ಫೈನಲ್ ಪಂದ್ಯ ನಡೆಯುವುದರ ಮೂಲಕ ಟೂರ್ನಿಗೆ ತೆರೆ ಬಿದ್ದಿದೆ.
13ನೇ ಆವೃತ್ತಿ ಐಪಿಎಲ್ ಮುಕ್ತಾಯಗೊಳ್ಳುತ್ತಿದ್ದಂತೆ ಇದೀಗ ಭಾರತೀಯ ಕ್ರಿಕೆಟ್ ಮಂಡಳಿ 14ನೇ ಆವೃತ್ತಿಯ ಟೂರ್ನಿಗೋಸ್ಕರ ಭರ್ಜರಿ ತಯಾರಿ ನಡೆಸಲು ಸಜ್ಜಾಗಿದೆ. ಭಾರತದಲ್ಲೇ ಮುಂದಿನ ಆವೃತ್ತಿ ಟೂರ್ನಿ ನಡೆಸಲು ಬಿಸಿಸಿಐ ಪ್ಲಾನ್ ಹಾಕಿಕೊಂಡಿದ್ದು, ಅದಕ್ಕೂ ಮುಂಚಿತವಾಗಿ ದೊಡ್ಡ ಮಟ್ಟದಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಸುವ ಇರಾದೆ ಹೊಂದಿದೆ.
2021ರಲ್ಲಿ ಮುಂದಿನ ಐಪಿಎಲ್ ಪಂದ್ಯ ನಡೆಯಲಿದ್ದು, ಬಿಸಿಸಿಐ ಅಧಿಕಾರಿ ತಿಳಿಸಿರುವ ಪ್ರಕಾರ, ಮುಂದಿನ ಟೂರ್ನಿಯಲ್ಲಿ ಮತ್ತೊಂದು ತಂಡ ಸೇರಿಸಿಕೊಳ್ಳುವ ಇರಾದೆ ಹೊಂದಲಾಗಿದೆ ಎನ್ನಲಾಗಿದೆ. 13ನೇ ಆವೃತ್ತಿ ಐಪಿಎಲ್ನಲ್ಲಿ ಕೊರೊನಾ ವೈರಸ್ ಕಾರಣ ಬಿಸಿಸಿಐ ಆರ್ಥಿಕ ತೊಂದರೆ ಅನುಭವಿಸಿದ್ದು, ಇದೀಗ ಅದನ್ನ ಸರಿದೂಗಿಸಲು ಈ ನಿರ್ಧಾರ ಕೈಗೊಳ್ಳಾಗಿದೆ ಎಂದು ಹೇಳಲಾಗುತ್ತಿದೆ.
ಅಹಮದಾಬಾದ್ ಮೂಲದ ಪ್ರಾಂಚೈಸಿ ಹೊಸದಾಗಿ ಐಪಿಎಲ್ ಸೇರಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದ್ದು, ಇದರ ಬಗ್ಗೆ ಬಿಸಿಸಿಐ ಅಧ್ಯಕ್ಷ ಗಂಗೂಲಿ ಯಾವುದೇ ರೀತಿಯ ಮಾಹಿತಿ ನೀಡಿಲ್ಲ. ಇನ್ನು 14ನೇ ಆವೃತ್ತಿಗಾಗಿ ಭಾರತದಲ್ಲೇ ಆಟಗಾರರ ಹರಾಜು ಪ್ರಕ್ರಿಯೆ ನಡೆಸುವ ಸಾಧ್ಯತೆ ಇದ್ದು, ಅದು ಯಾವ ದಿನಾಂಕದಂದು ನಡೆಯಲಿದೆ ಎಂಬುದರ ಬಗ್ಗೆ ಖಚಿತ ಮಾಹಿತಿ ಹೊರಬಿದ್ದಿಲ್ಲ.