ಮೆಲ್ಬೋರ್ನ್: ಭಾರತ ತಂಡದ ಆಟಗಾರರಿಗೆ ತರಬೇತಿ ನಡೆಸಲು ಅವಕಾಶ ಕಲ್ಪಿಸಿಕೊಡುವುದಕ್ಕಾಗಿ ಸಿಡ್ನಿಯ ಬ್ಲಾಕ್ಟೌನ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ 3 ಮಹಿಳೆಯರ ಬಿಬಿಎಲ್ ಪಂದ್ಯಗಳನ್ನು ಸ್ಥಳಾಂತರ ಮಾಡಲಾಗಿದೆ.
ಭಾರತ ತಂಡ ನವೆಂಬರ್ 12ರಂದು ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಲಿದ್ದು, ಸಿಡ್ನಿಯಲ್ಲಿ ಕ್ವಾರಂಟೈನ್ಗೆ ಒಳಗಾಗಲಿದೆ. ಹಾಗಾಗಿ ತರಬೇತಿ ಪಡೆಯಲು ಅನುಕೂಲವಾಗಲಿ ಎಂದು ಬಿಬಿಎಲ್ನ ಪಂದ್ಯಗಳನ್ನು ಸ್ಥಳಾಂತರಿಸಲಾಗಿದೆ. ಕೊಹ್ಲಿ ಪಡೆ ಈ 3 ತಿಂಗಳ ಆಸ್ಟ್ರೇಲಿಯಾ ಪ್ರವಾಸದಲ್ಲಿ 3 ಟಿ-20, 3 ಏಕದಿನ ಹಾಗೂ 54 ಟೆಸ್ಟ್ ಪಂದ್ಯಗಳನ್ನಾಡಲಿದೆ.
ನವೆಂಬರ್ 17 ಮತ್ತು 18ರಂದು ಬ್ಲಾಕ್ಟೌನ್ ಅಂತಾರಾಷ್ಟ್ರೀಯ ಸ್ಪೋರ್ಟ್ಸ್ ಪಾರ್ಕ್ನಲ್ಲಿ 4 ಪಂದ್ಯಗಳು ನಡೆಯಬೇಕಿತ್ತು. ಆದರೆ, ಆ ನಾಲ್ಕು ಪಂದ್ಯಗಳನ್ನು ಸಿಡ್ನಿ ಶೋಗ್ರೌಂಡ್ ಸ್ಟೇಡಿಯಂಗೆ ಸ್ಥಳಾಂತರಿಸಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಣೆ ಹೊರಡಿಸಿದೆ.
ಇದಕ್ಕೂ ಮುನ್ನ ಅಡಿಲೇಡ್ನಲ್ಲಿ ಡಿಸೆಂಬರ್ 17ರಿಂದ ಆರಂಭವಾಗುವ ಮೊದಲ ಟೆಸ್ಟ್ ಡೇ ಅಂಡ್ ನೈಟ್ ಪಂದ್ಯವಾಗಿರಲಿದೆ ಎಂದು ತಿಳಿಸಿದ್ದ ಕ್ರಿಕೆಟ್ ಆಸ್ಟ್ರೇಲಿಯಾ ನಂತರ ನಡೆಯುವ 2 ನೇ ಟೆಸ್ಟ್ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ಗೆ ಸುಮಾರು 25 ಸಾವಿರ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಘೋಷಣೆ ಮಾಡಿದೆ.