ನವದೆಹಲಿ: ಈ ಹಿಂದೆ ವಿಶ್ವಕಪ್ಗಾಗಿ ಟೀಂ ಇಂಡಿಯಾ ಆಯ್ಕೆ ಸಮಿತಿ 15 ಸದಸ್ಯರನ್ನೊಳಗೊಂಡ ತಂಡ ಆಯ್ಕೆ ಮಾಡಿದ್ದಾಗಲೂ ಅಂಬಾಟಿ ರಾಯುಡುಗೆ ಅವಕಾಶ ನೀಡದಿದ್ದಕ್ಕಾಗಿ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಬಿಸಿಸಿಐ ನಡೆ ವಿರುದ್ಧ ಹರಿಹಾಯ್ದಿದ್ದರು. ಇದೀಗ ಅವರು ನಿವೃತ್ತಿ ಘೋಷಣೆ ಮಾಡುತ್ತಿದ್ದಂತೆ ಮತ್ತೆ ಗೌತಮ್ ಗಂಭೀರ್ ಆಕ್ರೋಶ ಹೊರಹಾಕಿದ್ದಾರೆ.
ವಿಶ್ವಕಪ್ನಲ್ಲಿ ರಿಷಭ್ ಪಂತ್ ಹಾಗೂ ರಾಯುಡುಗೆ ಅವಕಾಶ ನೀಡದೇ ಇರುವುದಕ್ಕೆ ಕ್ರೀಡಾಭಿಮಾನಿಗಳು ಆಯ್ಕೆ ಸಮಿತಿ ನಿರ್ಧಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಈ ವೇಳೆ, ಇಬ್ಬರು ಆಟಗಾರರನ್ನ ವರ್ಲ್ಡ್ಕಪ್ನ ಮೀಸಲು ಆಟಗಾರರು ಎಂದು ಘೋಷಣೆ ಮಾಡಿತ್ತು. ಇದೇ ವೇಳೆ, ಆರಂಭಿಕ ಆಟಗಾರ ಶಿಖರ್ ಧವನ್ ತಂಡದಿಂದ ಹೊರ ಬೀಳುತ್ತಿದ್ದಂತೆ ರಿಷಭ್ ಪಂತ್ಗೆ ಬುಲಾವ್ ನೀಡಿದ್ದರು. ಇದರ ಮಧ್ಯೆ ವಿಶ್ವಕಪ್ಗೆ ಆಯ್ಕೆಗೊಂಡಿದ್ದ ಆಲ್ರೌಂಡರ್ ವಿಜಯ್ ಶಂಕರ್ ಗಾಯಗೊಂಡು ತಂಡದಿಂದ ಹೊರಬಿದ್ದಾಗ ರಾಯುಡುಗೆ ಅವಕಾಶ ನೀಡದೇ, ಕನ್ನಡಿಗ ಮಯಾಂಕ್ ಅಗರವಾಲ್ಗೆ ಆಯ್ಕೆ ಸಮಿತಿ ಮಣೆ ಹಾಕಿತ್ತು. ಇದು ರಾಯುಡುಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಇದರ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಣೆ ಮಾಡಿದ್ದಾರೆ.
ಇದೇ ವಿಷಯವನ್ನಿಟ್ಟುಕೊಂಡು ಕ್ರಿಕೆಟರ್ ಹಾಗೂ ರಾಜಕಾರಣಿ ಗಂಭೀರ್ ಆಯ್ಕೆ ಸಮಿತಿ ವಿರುದ್ಧ ಹರಿಹಾಯ್ದಿದ್ದಾರೆ. ಆಯ್ಕೆ ಸಮಿತಿಯಲ್ಲಿರುವ ಐವರು ಆಯ್ಕೆದಾರರು ಸೇರಿ ಅಂಬಾಡಿ ರಾಯುಡು ಹೊಡೆದಷ್ಟು ರನ್ ಗಳಿಕೆ ಮಾಡಿಲ್ಲ. ಅವರ ನಿವೃತ್ತಿ ನನಗೆ ತುಂಬಾ ನೋವುಂಟು ಮಾಡಿದೆ. ಭಾರತೀಯ ಕ್ರಿಕೆಟ್ಗೆ ಇದು ದುಃಖದ ವಿಷಯ ಎಂದು ಹೇಳಿದ್ದಾರೆ. ಜತೆಗೆ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಹೊರತಾಗಿ ಸಹ ಅವರಿಗೆ ಅವಕಾಶ ನೀಡದೇ ಇರುವುದು ಅವರಿಗೆ ಮಾಡಿರುವ ಅನ್ಯಾಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿಶ್ವಕಪ್ಗಾಗಿ ತಂಡ ಆಯ್ಕೆಯಾದಾಗ ವಿಜಯ್ ಶಂಕರ್ ಅವಕಾಶ ಪಡೆದ ವಿಚಾರಕ್ಕೆ ಸಂಬಂಧಿದಂತೆ ಪ್ರತಿಕ್ರಿಯೆ ನೀಡಿದ್ದ ರಾಯುಡು, ವಿಶ್ವಕಪ್ ನೋಡಲು ತ್ರಿಡಿ ಗ್ಲಾಸ್ ಖರೀದಿ ಮಾಡಿರುವೆ ಎಂದು ಟ್ವೀಟ್ ಮಾಡಿದ್ದರು.