ನವದೆಹಲಿ : ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ನಿರಾಶಾದಾಯಕ ಪ್ರದರ್ಶನ ತೋರಿರುವ ಶಹಬಾಜ್ ನದೀಮ್ ಅವರನ್ನು ಶನಿವಾರದಿಂದ ಆರಂಭವಾಗಲಿರುವ 2ನೇ ಟೆಸ್ಟ್ ಪಂದ್ಯದಿಂದ ಕೈಬಿಡುವ ಸಾಧ್ಯತೆಯಿದೆ. ಫಿಟ್ ಆಗಿರುವ ಅಕ್ಸರ್ ಪಟೇಲ್ ಕಣಕ್ಕಿಳಿಯಬಹುದು ಎನ್ನಲಾಗುತ್ತಿದೆ.
ಆದರೆ, ನದೀಮ್ ಬದಲಿ ಆಟಗಾರನನ್ನು ಶುಕ್ರವಾರ ನಿರ್ಧರಿಸಲಾಗುತ್ತಿದೆ. ಈಗಾಗಲೇ ಕುಲ್ದೀಪ್ ಯಾದವ್ ಅವರನ್ನು ಮೊದಲ ಟೆಸ್ಟ್ ಪಂದ್ಯದಿಂದ ಹೊರಗಿಟ್ಟಿದ್ದರಿಂದ ಕೆಲವು ಮಾಜಿ ಕ್ರಿಕೆಟಿಗರು ಕೂಡ ಮ್ಯಾನೇಜ್ಮೆಂಟ್ ವಿರುದ್ಧ ತಿರುಗಿಬಿದ್ದಿದ್ದರು. ಹಾಗಾಗಿ, 2ನೇ ಟೆಸ್ಟ್ಗೆ ಅಕ್ಸರ್ ಅಥವಾ ಕುಲ್ದೀಪ್ ಇಬ್ಬರಲ್ಲಿ ಯಾರು ಆಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
"ಅಕ್ಸರ್ ಪಟೇಲ್ ಸಣ್ಣ ಮೊಣಕಾಲು ಗಾಯಕ್ಕೆ ತುತ್ತಾಗಿದ್ದರು. ಅವರು ಈಗಾಗಲೇ ಸುಧಾರಿಸಿಕೊಂಡಿದ್ದು, ನೆಟ್ಸ್ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಬೌಲಿಂಗ್ ಕೂಡ ಆರಂಭಿಸಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದೇವೆ. ಯಾಕೆಂದರೆ, ಅವರು ಆರಂಭಿಕ ಟೆಸ್ಟ್ಗೆ ನಮ್ಮ ಮೊದಲ ಆಯ್ಕೆಯಾಗಿದ್ದರು.
ಆದರೆ, 2ನೇ ಟೆಸ್ಟ್ಗೆ ಅವರನ್ನು ಆಯ್ಕೆಯ ಮಾಡುವ ನಿರ್ಧಾರ ನಾಯಕ ಕೊಹ್ಲಿ, ಮುಖ್ಯ ಕೋಚ್ ರವಿ ಶಾಸ್ತ್ರಿ ಹಾಗೂ ಬೌಲಿಂಗ್ ಕೋಚ್ ಭರತ್ ಅರುಣ್ ಮೇಲೆ ಅವಲಂಬಿತವಾಗಿದೆ" ಎಂದು ಬಿಸಿಸಿಐ ಮೂಲಕ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಅಲ್ಲದೆ ಪಂದ್ಯದ ಸೋಲಿನ ಬಳಿಕ ನದೀಮ್ ಬೌಲಿಂಗ್ ಬಗ್ಗೆ ವಿರಾಟ್ ಕೊಹ್ಲಿ ಅಸಮಾಧಾನ ಹೊರ ಹಾಕಿದ್ದರು. ನದೀಮ್ 59 ಓವರ್ಗಳಲ್ಲಿ 233 ರನ್ ನೀಡಿ ಕೇವಲ 4 ವಿಕೆಟ್ ಪಡೆದಿದ್ದರು. ಅಲ್ಲದೆ 9 ನೋಬಾಲ್ ಎಸೆದು ಟೀಕೆಗೆ ಗುರಿಯಾಗಿದ್ದರು.
ಇವರ ಜೊತೆಗೆ ಯುವ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಕೂಡ ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಅವರು 26 ಓವರ್ಗಳಲ್ಲಿ 98 ರನ್ ಬಿಟ್ಟುಕೊಟ್ಟು ಯಾವುದೇ ವಿಕೆಟ್ ಪಡೆದಿರಲಿಲ್ಲ. ಆದರೆ, ಬ್ಯಾಟಿಂಗ್ನಲ್ಲಿ ಅಜೇಯ 85ರನ್ ಸಿಡಿಸಿದ್ದರು. ಹಾಗಾಗಿ, ಅವರಿಗೆ 2ನೇ ಟೆಸ್ಟ್ನಲ್ಲೂ ಆಡುವ ಅವಕಾಶ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ.