ಮುಂಬೈ: ಟೀಮ್ ಇಂಡಿಯಾವನ್ನು ವಿಶ್ವದರ್ಜೆಯ ತಂಡವನ್ನಾಗಿಸಿದ ಅಗ್ರೆಸಿವ್ ಕ್ಯಾಪ್ಟನ್ ಸೌರವ್ ಗಂಗೂಲಿ ಅವರು ಬಿಸಿಸಿಐ ನೂತನ ಅಧ್ಯಕ್ಷ ಗಾದಿಗೇರುವುದು ಬಹುತೇಕ ಖಚಿತವಾಗಿದೆ.
ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಭಾನುವಾರ ನಡೆದಿರುವ ರಾಜಕೀಯ ಬೆಳವಣಿಗೆಯಿಂದ ಅವಿರೋಧವಾಗಿ ಬಿಸಿಸಿಐ ಗದ್ದುಗೆಗೇರಲು ಸಿದ್ಧರಾಗಿದ್ದಾರೆ. ಈ ವೇಳೆ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ, ಪ್ರಥಮ ದರ್ಜೆ ಕ್ರಿಕೆಟಿಗರಿಗೆ ಮೊದಲ ಆದ್ಯತೆ ನೀಡುವುದಾಗಿ ಹೇಳಿದ್ದಾರೆ.
ತಾವು ಈ ಹಿಂದೆ ಇದ್ದ ಸುಪ್ರಿಂಕೋರ್ಟ್ ನೇಮಿಸಿದ್ದ ಆಡಳಿತ ಮಂಡಳಿ(CoA)ಗೆ ರಣಜಿ ಕ್ರಿಕೆಟ್ ಹಾಗೂ ಪ್ರಥಮ ದರ್ಜೆ ಕ್ರಿಕೆಟಿಗರ ಹಣಕಾಸಿನ ಬಗ್ಗೆ ಗಮನ ಹರಿಸಲು ಕೇಳಿಕೊಂಡಿದ್ದೆ. ಆದರೆ ಅವರು ನನ್ನ ಮಾತನ್ನು ಕೇಳಲು ಸಿದ್ಧರಿರಲಿಲ್ಲ ಎಂದು ದಾದಾ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು, ಅವಿರೋಧವಾಗಿ ವಿಶ್ವದ ದೊಡ್ಡ ಕ್ರಿಕೆಟ್ ಸಂಸ್ಥೆಗೆ ಆಯ್ಕೆಯಾಗುತ್ತಿರುವುದು ಖುಷಿಯ ವಿಚಾರ. ಉತ್ತಮ ಕೆಲಸಗಳನ್ನು ಮಾಡುವುದಕ್ಕೆ ಇದು ಅತ್ಯುತ್ತಮ ಅವಕಾಶ. ಅದರಲ್ಲೂ ಅವಿರೋಧವಾಗಿ ಆಯ್ಕೆಯಾದಾಗ ಜವಾಬ್ದಾರಿ ಹೆಚ್ಚಿರುತ್ತದೆ. ಇಂತಹ ದೊಡ್ಡ ಸಂಸ್ಥೆಯನ್ನು ನಿರ್ವಹಿಸುವುದು ಸವಾಲಿನ ಕೆಲಸವಾಗಿದೆ ಎಂದು ದಾದಾ ತಿಳಿಸಿದ್ದಾರೆ.
ಭಾನುವಾರ ಸಂಜೆ ನಡೆದಿದ್ದ ಬಿಸಿಸಿಐ ಸಭೆಯಲ್ಲಿ ಮೊದಲು ಗಂಗೂಲಿಗೆ ಐಪಿಎಲ್ ಮುಖ್ಯಸ್ಥ ಸ್ಥಾನದ ಆಫರ್ ನೀಡಲಾಗಿತ್ತು. ಆದರೆ ಗಂಗೂಲಿ ಒಪ್ಪದ ಕಾರಣ ಕನ್ನಡಿಗ ಬ್ರಿಜೇಶ್ ಪಟೇಲ್ಗೆ ಆ ಸ್ಥಾನ ಒಲಿದಿದೆ. ಬಿಸಿಸಿಐ ಅಧ್ಯಕ್ಷ ಪಟ್ಟವನ್ನು ಪಡೆಯುವಲ್ಲಿ ಗಂಗೂಲಿ ಯಶಸ್ವಿಯಾಗಿದ್ದಾರೆ.