ನವದೆಹಲಿ: ಎಂ ಎಸ್ ಧೋನಿ ಅವರಿಗೆ ನನ್ನನ್ನು ಹೋಲಿಕೆ ಮಾಡುತ್ತಿರುವುದಕ್ಕೆ ನನಗೆ ಸಂತಸವಿದೆ. ಆದರೆ, ನನಗದು ಇಷ್ಟವಿಲ್ಲ, ನಾನು ಕ್ರಿಕೆಟ್ನಲ್ಲಿ ನನ್ನದೇ ಆದ ಹೆಸರನ್ನು ಮಾಡಲು ಬಯಸುತ್ತೇನೆ ಎಂದು ಟೀಂ ಇಂಡಿಯಾ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಮುಕ್ತಾಯವಾದ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಗೆಲುವಿನ ಬಳಿಕ ಟೀಂ ಇಂಡಿಯಾ ಆಟಗಾರರು ತವರಿಗೆ ಮರಳಿದ್ದು, ಮುಂಬೈಗೆ ಬಂದಿಳಿದ ಆಟಗಾರರಿಗೆ ಭರ್ಜರಿ ಸ್ವಾಗತ ಕೋರಲಾಗಿದೆ.
ಇದೇ ವೇಳೆ ಮಾತನಾಡಿದ, ರಿಷಭ್ ಪಂತ್ "ನಾವು ಟ್ರೋಫಿಯನ್ನು ಉಳಿಸಿಕೊಂಡಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಇಡೀ ತಂಡವು ತುಂಬಾ ಸಂತೋಷವಾಗಿದೆ" ಎಂದಿದ್ದಾರೆ.
"ಎಂ ಎಸ್ ಧೋನಿಯಂತಹ ಆಟಗಾರರಿಗೆ ಹೋಲಿಸಿದಾಗ ಸಂತಸವಾಗುತ್ತದೆ. ಆದರೆ ಇಂತಹ ಹೋಲಿಕೆ ನನಗೆ ಇಷ್ಟವಿಲ್ಲ. ಭಾರತೀಯ ಕ್ರಿಕೆಟ್ ತಂಡದಲ್ಲಿ ನನ್ನದೇ ಹೆಸರನ್ನು ಮಾಡಲು ನಾನು ಬಯಸುತ್ತೇನೆ. ಅಲ್ಲದೆ ಲೆಜೆಂಡ್ ಆಟಗಾರರೊಂದಿಗೆ ಯುವಕನನ್ನು ಹೋಲಿಸುವುದು ಸರಿಯಲ್ಲ" ಎಂದು ಪಂತ್ ಹೇಳಿದ್ದಾರೆ.
4ನೇ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್ನಲ್ಲಿ 5ನೇ ಆಟಗಾರನಾಗಿ ಬಂದ ಪಂತ್ ಆಕ್ರಮಣಕಾರಿ ಬ್ಯಾಟಿಂಗ್ ಮಾಡುವ ಮೂಲಕ ಭಾರತ 329 ರ ಗಡಿ ಮುಟ್ಟಲು ನೆರವಾದರು. 9 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 89 ರನ್ ಗಳಿಸಿ ಟೀಂ ಇಂಡಿಯಾ ಗೆಲುವಿಗೆ ಕಾರಣರಾದರು.